ಬೆಳ್ಳಂದೂರು ಕೆರೆ ಪಕ್ಕದ ಕೈಗಾರಿಕೆಗಳ ಬಂದ್ ಗೆ ಎನ್ ಜಿಟಿ ಆದೇಶ

ಬೆಳ್ಳಂದೂರು ಕೆರೆಗೆ ಮಲಿನ, ತ್ಯಾಜ್ಯ, ವಿಷಕಾರಿ ನೀರನ್ನು ಹರಿಸುವ ಕೆರೆಯ ಸುತ್ತಮುತ್ತಲಿರುವ ಎಲ್ಲಾ ಕೈಗಾರಿಕೆ, ಕಾರ್ಖಾನೆಗಳನ್ನು  ತಕ್ಷಣದಿಂದಲೇ ಬಂದ್ ಮಾಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಹತ್ವದ ಆದೇಶ ಪ್ರಕಟಿಸಿದೆ.

ಬೆಳ್ಳಂದೂರು ಕೆರೆ ಅತೀವವಾಗಿ ಮಾಲಿನ್ಯಗೊಂಡಿದ್ದು, ಮಾಲಿನ್ಯ ತಡೆಗಟ್ಟಲು ಸಂಬಂಧಪಟ್ಟ ಪ್ರಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ ನ್ಯಾಯಾಧಿಕರಣದ ಮುಖ್ಯ ನ್ಯಾಯಮೂರ್ತಿ ಸ್ವತಂತ್ರ ಕುಮಾರ್, ಈ ಆದೇಶ ಉಲ್ಲಂಘಿಸಿ ಮಲಿನ ನೀರು ಅಥವಾ ತ್ಯಾಜ್ಯಗಳನ್ನು ಕೆರೆಗೆ ಹರಿಸುವವರಿಗೆ ಬೆಂಗಳೂರು ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದಾಕ್ಷಿಣ್ಯವಾಗಿ ರೂ. 5 ಲಕ್ಷ ದಂಡ ವಿಧಿಸಬೇಕು ಎಂದು ತಿಳಿಸಿದೆ.

ಕೆರೆ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮಹೇಂದ್ರ ಜೈನ್ ಮಾರ್ಗದರ್ಶನದಲ್ಲಿ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಬೇಕು.  ನ್ಯಾಯಾಧಿಕರಣ ತೀರ್ಪಿನ ಸಮರ್ಪಕ ಅನುಷ್ಠಾನ ಆಗಿದೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲನಾ ಸಮಿತಿ 1 ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಧಿಕರಣ ನಿರ್ದೇಶನ ನೀಡಿದೆ.