ಪ್ಯಾಲೆಸ್ತೇನ್ ಅಭಿವೃದ್ಧಿಗೆ ಭಾರತದಿಂದ ನೆರವು: ರಾಷ್ಟ್ರಪತಿ

ಪ್ಯಾಲೇಸ್ತೇನ್ ಜನರ ಅಭಿವೃದ್ಧಿಗೆ ಭಾರತ ಪೂರ್ಣ ಬೆಂಬಲ ನೀಡಲು ಬದ್ಧವಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭರವಸೆ ನೀಡಿದ್ದಾರೆ.
ಭಾರತ ಭೇಟಿಯಲ್ಲಿರುವ ಮಹಮ್ಮದ್ ಅಬ್ಬಾಸ್ ಅವರನ್ನು ರಾಷ್ಟ್ರಪತಿ ಭವನಕ್ಕೆ ಬರ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ಪ್ಯಾಲೇಸ್ತೇನ್ ಜತೆಗೆ ಭಾರತ ಉತ್ತಮ ದ್ವಿಪಕ್ಷೀಯ ಸಂಬಂಧ ಸಾಧಿಸಿಕೊಂಡಿದೆ. ಅಬ್ಬಾಸ್ ಅವರ ಭೇಟಿಯಿಂದಾಗಿ ಎರಡೂ ದೇಶಗಳ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬುದು ನನ್ನ ಭಾವನೆ. ಭದ್ರತೆ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಕೃಷಿ, ಶಿಕ್ಷಣ, ಸಂಸ್ಕೃತಿ, ಆರೋಗ್ಯ ಹಾಗೂ ಕ್ರೀಡಾ ವಲಯದಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರಕ್ಕೆ ಮತ್ತಷ್ಟು ಆದ್ಯತೆ ನೀಡುವ ಬಗ್ಗೆ ಚರ್ಚಿಸಿರುವುದು ನಿಜಕ್ಕೂ ತೃಪ್ತಿ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.