ಇಂದಿನಿಂದ ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಜಪಾನ್ ಪ್ರಧಾನಿ ಶಿಂಜ್ಹೊ ಅಬೆ ; ಗುಜರಾತ್‌ನ ಅಹಮದಾಬಾದ್‌ನಲ್ಲಿ ಅವರನ್ನು ಬರಮಾಡಿಕೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ;  ಭಾರತ – ಜಪಾನ್ ವಾರ್ಷಿಕ ಶೃಂಗಸಭೆ ಮತ್ತು ತ್ವರಿತವೇಗದ ರೈಲು ಯೋಜನೆ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಭೇಟಿಯ ಪ್ರಮುಖ ಅಜೆಂಡಾ.

ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಜಪಾನ್ ಪ್ರಧಾನಿ ಶಿಂಜ್ಹೊ ಅಬೆ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಗುಜರಾತ್‌ನ ಅಹಮದಾಬಾದಿನಲ್ಲಿ ಬರಮಾಡಿಕೊಳ್ಳಲಿದ್ದಾರೆ.

ಗುಜರಾತ್‌ನ ಗಾಂಧಿನಗರದಲ್ಲಿ ನಡೆಯಲಿರುವ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಮೋದಿ ಹಾಗೂ ಅಬೆಯವರ ನಾಲ್ಕನೇ ಸಭೆ ಇದಾಗಿದ್ದು, ಶೃಂಗಸಭೆಯ ೧೨ನೇ ಆವೃತ್ತಿ ಗಾಂಧಿನಗರದಲ್ಲಿ ನಾಳೆ ನಡೆಯಲಿದೆ.

ಭಾರತ ಮತ್ತು ಜಪಾನ್ ದೇಶಗಳ ಭವಿಷ್ಯದ ದಿಕ್ಕನ್ನು ನಿರ್ಧರಿಸುವ ನಿಖರ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಚೌಕಟ್ಟಿನಡಿಯಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರ ವಿಷಯದಲ್ಲಿ ಇತ್ತೀಚೆಗೆ ಕೈಗೊಂಡ ಅಭಿವೃದ್ಧಿ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ.

ಅಹಮದಾಬಾದ್ ಮತ್ತು ಮುಂಬೈ ನಡುವೆ ಭಾರತದ ಮೊದಲ ವೇಗದ ರೈಲು ಯೋಜನೆ ಕಾರ್ಯಾರಂಭ ಕಾರ್ಯಕ್ರಮದಲ್ಲಿ ಕೂಡ ಉಭಯ ನಾಯಕರು ಭಾಗವಹಿಸಲಿದ್ದಾರೆ. ಈ ರೈಲು ಸಂಚಾರ ಆರಂಭಗೊಂಡರೆ ಎರಡೂ ನಗರಗಳ ಮಧ್ಯೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ.

ತ್ವರಿತ ರೈಲು ಯೋಜನೆಗಳ ನಿರ್ಮಾಣಕ್ಕೆ ಜಪಾನ್ ದೇಶ ಹೆಸರಾಗಿದ್ದು, ಅದರ ಶಿಂಕನ್ಸೆನ್ ಬುಲೆಟ್ ರೈಲು ವಿಶ್ವದಲ್ಲಿಯೇ ಅತ್ಯಂತ ವೇಗದ್ದಾಗಿದೆ. ಇದಾದ ಬಳಿಕ ಭಾರತ-ಜಪಾನ್ ವ್ಯಾಪಾರ ಸಭೆ ಕೂಡ ನಡೆಯಲಿದೆ.

ಅಹಮದಾಬಾದ್ ನಲ್ಲಿರುವ ಮಹಾತ್ಮಾ ಗಾಂಧಿಯವರು ಕಟ್ಟಿಸಿದ ಸಯರ್ಮತಿ ನದಿ ತಟದಲ್ಲಿರುವ ಸಬರ್ಮತಿ ಆಶ್ರಮಕ್ಕೆ ಇಂದು ಇಬ್ಬರೂ ನಾಯಕರು ಭೇಟಿ ನೀಡಲಿದ್ದಾರೆ. ಅಹಮದಾಬಾದಿನಲ್ಲಿರುವ ೧೬ನೇ ಶತಮಾನದ ಸಿದಿ ಸೈಯಿದ್ ನಿ ಜಾಲಿಗೆ ಮತ್ತು ಮಹಾತ್ಮಾ ಗಾಂಧಿಯವರಿಗೆ ಸಮರ್ಪಿಸಲಾದ ವಸ್ತು ಸಂಗ್ರಹಾಲಯ ದಂಡಿ ಕುಟೀರಕ್ಕೆ ಕೂಡ ತೆರಳಲಿದ್ದಾರೆ.

ಜಪಾನ್ ಪ್ರಧಾನಿ ಭೇಟಿಗೆ ಮುನ್ನ ನಿನ್ನೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಭಾರತ ಜಪಾನ್ ದೇಶದೊಂದಿಗೆ ಉತ್ತಮ ಬಾಂಧವ್ಯದಲ್ಲಿ ನಂಬಿಕೆ ಹೊಂದಿದ್ದು, ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ವಿಸ್ತರಿಸಲು ಬಯಸುತ್ತದೆ ಎಂದು ಹೇಳಿದ್ದಾರೆ.