ಭಾರತ – ಬೆಲರೂಸ್ ಸಹಕಾರ ಉತ್ತಮ

ಬರಹ: ಸುನೀಲ್ ಗಟದೆ, ರಾಜಕೀಯ ವಿಶ್ಲೇಷಕ

ತಮ್ಮ ದ್ವಿಪಕ್ಷೀಯ ಸಂಬಂಧಕ್ಕೆ ಉತ್ತೇಜನ ನೀಡಲು ಭಾರತ ಮತ್ತು ಬೆಲರೂಸ್ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಹಕಾರ ಹೆಚ್ಚಿಸಿಕೊಳ್ಳಲು ೧೦ಕ್ಕೂ ಹೆಚ್ಚು ವಿವಿಧ ಒಪ್ಪಂದಗಳನ್ನು ಮಾಡಿಕೊಂಡಿವೆ. ಈಗ ತಾನೇ ಮುಗಿದ ಬೆಲರೂಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಷೆಂಕೋ ಅವರ ಭಾರತ ಭೇಟಿಯಲ್ಲಿ ರಕ್ಷಣಾ ವಲಯದ ಉತ್ಪಾದನೆ ಮತ್ತು ಜಂಟಿಯಾಗಿ ಅಭಿವೃದ್ಧಿ ಸಾಧ್ಯತೆಗಳ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

ನವದೆಹಲಿಯ ತನ್ನ ಮಹತ್ವಾಕಾಂಕ್ಷೆಯ “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮ ಜಾರಿಗೆ ತರಲು ಪಣ ತೊಟ್ಟಿರುವ ಸಂದರ್ಭದಲ್ಲಿ ಬೆಲರೂಸ್ ಜೊತೆಗೆ ರಕ್ಷಣಾ ಒಪ್ಪಂದಗಳನ್ನು ಮಾಡುವ ಎಲ್ಲ ಸಾಧ್ಯತೆ ಇದೆ. ಏಕೆಂದರೆ ಸೋವಿಯರ್ ಒಕ್ಕೂಟದ ದಿನಗಳಿಂದಲೂ ಬೆಲರೂಸ್ ರಕ್ಷಣಾ ಉಪಕರಣಗಳ ಉತ್ಪಾದನೆ ಮಾಡುತ್ತಿದೆ. ಭಾರತದ ಪ್ರಧಾ‌ನ ಮಂತ್ರಿ ನರೇಂದ್ರ ಮೋದಿ ಮತ್ತು ಬೆಲರೂಷಿಯನ್ ಅಧ್ಯಕ್ಷ ಲುಕಷೆಂಕೋ ಉಭಯ ದೇಶಗಳ ಆರ್ಥಿಕ ವ್ಯವಹಾರವನ್ನು ಉತ್ತಮ ಪಡಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಮೋದಿ ಅವರು ಈ ಮಾತುಕತೆಯು ವಿವಿಧ ವಲಯಗಳನ್ನು ಒಳಗೊಂಡಿತ್ತು ಮತ್ತು ಭವಿಷ್ಯದ ಬಗ್ಗೆಗಿತ್ತು ಎಂದು ಹೇಳಿದರೆ ಬೆಲರೂಷಿಯನ್ ಅಧ್ಯಕ್ಷರು ಉಭಯ ದೇಶಗಳು ಸಹಕಾರದ “ಹೊಸ ಹಂತದ” ಬಾಗಿಲಿನಲ್ಲಿವೆ ಎಂದು ಹೇಳಿದ್ದಾರೆ. ಬಹು ಧ್ರುವೀಯ ಜಗತ್ತಿನಲ್ಲಿ ಭಾರತವು ಅತ್ಯಂತ ಪ್ರಮುಖ ಸ್ಥಾನ‌ ಪಡೆದಿದೆ ಎಂದು ಬೆಲರೂಷಿಯನ್ ಅಧ್ಯಕ್ಷರು ಅಭಿಪ್ರಾಯ ಪಟ್ಟಿದ್ದಾರೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ೨೦೧೫ ರ ಮೇಯಲ್ಲಿ ಬೆಲರೂಸ್ ಗೆ ಭೇಟಿ ನೀಡಿದ್ದರು. ಬೆಲರೂಸ್ ಜೊತೆಗಿನ ಭಾರತದ ಸಂಬಂಧ ಹಿಂದಿನಿಂದಲೂ ಸೌಹಾರ್ದವಾಗಿತ್ತು. ಸೋವಿಯತ್ ಒಕ್ಕೂಟದಿಂದ ೧೯೯೧ ರಲ್ಲಿ ಬೆಲರೂಸ್ ವಿಭಜನೆಗೊಂಡ ಸಂದರ್ಭದಲ್ಲಿ ಅದಕ್ಕೆ ಮಾನ್ಯತೆ ನೀಡಿದ ಮೊದಲ ದೇಶಗಳಲ್ಲಿ ಭಾರತವು ಒಂದು. ಅಧಿಕೃತ ರಾಜತಾಂತ್ರಿಕ ಸಂಬಂಧವನ್ನು ಪ್ರಾರಂಭಿಸಿ ೧೯೯೩ ರಲ್ಲಿ ಮಿನ್ಸ್ಕ್ ನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ಪ್ರಾರಂಭಿಸಲಾಯಿತು. ಬೆಲರೂಸ್ ಭಾರತದಲ್ಲಿ ೧೯೯೮ ರಲ್ಲಿ ರಾಯಭಾರ ಕಚೇರಿಯನ್ನು ತೆರೆಯಿತು.

ಬೆಲರೂಸ್ ನ ಅಧ್ಯಕ್ಷರು ಭಾರತಕ್ಕೆ ನೀಡುತ್ತಿರುವ ಮೂರನೇ ಭೇಟಿ ಇದು. ರಾಜತಾಂತ್ರಿಕ ಸಂಬಂಧದ ೨೫ನೇ ವರ್ಷಾಚರಣೆ ಆಚರಿಸುತ್ತಿರುವ ಈ ಸಂದರ್ಭದಲ್ಲಿನ ಈ ಭೇಟಿ ಮಹತ್ವ ಪಡೆದಿದೆ. ಈ ಸಂದರ್ಭವನ್ನು ಪ್ರತಿನಿಧಿಸುವ ಅಂಚೆ ಚೀಟಿಯನ್ನು ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಲುಕಷೆಂಕೋ ಬಿಡುಗಡೆ ಮಾಡಿದರು.

ಈಗ ಮಾಡಿಕೊಂಡಿರುವ ಒಪ್ಪಂದವು ದ್ವಿಪಕ್ಷೀಯ ಸಂಬಂಧದ ಸಹಕಾರವನ್ನು ವಿವಿಧ ಕ್ಷೇತ್ರಗಳಾದ ತೈಲ ಮತ್ತು ಅನಿಲ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ ಮತ್ತು ಕ್ರೀಡೆಗಳಿಗೆ ವಿಸ್ತರಿಸುವ ಆಶಯ ಹೊಂದಿದೆ.

ಭಾರತದ ಹೂಡಿಕೆದಾರರನ್ನು ಬೆಲರೂಸ್ ಗೆ ಆಹ್ವಾನಿಸಿದ ಲುಕಷೆಂಕೊ, ಹೂಡಿಕೆಗೆ ಸೂಕ್ತ ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದಾರೆ. ಭಾರತ ಮತ್ತು ಬೆಲರೂಸ್ ಬಹು ಪಕ್ಷೀಯ ಆರ್ಥಿಕ ಒಪ್ಪಂದಗಳಾದ ಯೂರೋಷಿಯನ್ ಆರ್ಥಿಕ ಒಕ್ಕೂಟ (ಇಇಯು) ಮತ್ತು ಅಂತಾರಾಷ್ಟ್ರೀಯ ಉತ್ತರ ದಕ್ಷಿಣ ಸಾರಿಗೆ ಕಾರಿಡಾರ್ ನ ಭಾಗವಾಗಿವೆ. ಭಾರತವು ಇಇಯು ಜೊತೆ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಸಮಾಲೋಚನೆ ನಡೆಸುತ್ತಿದೆ. ಬೆಲರೂಸ್ ಪಂಚ ಸದಸ್ಯರ ಇಇಯುನ ಭಾಗವಾಗಿದ್ದು ಪ್ರಭಾವಿ ಮಧ್ಯ ಏಷ್ಯಾದ ರಾಷ್ಟ್ರ ಎಂದು ಪರಿಗಣಿಸಲಾಗುತ್ತದೆ. ಇಂಡೋ-ಬೆಲರೂಸ್ ಬ ದ್ವಿಪಕ್ಷೀಯ ವ್ಯಾಪಾರವು ೨೦೧೬ರಲ್ಲಿ ೪೦೨ ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಔಷಧೀಯ ಮತ್ತು ತೈಲ ಹಾಗು ಇಂಧನ ಕ್ಷೇತ್ರದಲ್ಲಿ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳು ಇವೆ.

ರಾಜಕೀಯ ಭಾಗದಲ್ಲಿ, ಬಹುಪಕ್ಷೀಯ ಗುಂಪುಗಳಲ್ಲಿ “ಪರಸ್ಪರರ ಆಸಕ್ತಿಯ ವಿಷಯಗಳಲ್ಲಿ” ಪರಸ್ಪರ ಸಹಕರಿಸಲು ಸಮ್ಮತಿಸಿವೆ. ಅಂತಾರಾಷ್ಟ್ರೀಯ, ಬಹುಪಕ್ಷೀಯ ಮತ್ತು ರಾಜಕೀಯ ವಿಷಯಗಳಲ್ಲಿ ಉಭಯ ದೇಶಗಳ ನಡುವೆ ಉತ್ತಮ ತಿಳುವಳಿಕೆ ಮತ್ತು ಹೊಂದಾಣಿಕೆ ಇದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಪಡೆಯುವ ಭಾರತದ ಉಮೇದುದಾರಿಕೆಯನ್ನು ಬೆಲರೂಸ್ ಬೆಂಬಲಿಸುತ್ತಿದೆ. ೨೦೧೧-೧೨ ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ತಾತ್ಕಾಲಿಕ ಸ್ಥಾನಕ್ಕೂ ಬೆಲರೂಸ್ ಭಾರತವನ್ನು ಬೆಂಬಲಿಸಿತ್ತು. ಅಣು ಪೂರೈಕೆದಾರರ ಗುಂಪು (ಎನ್ಎಸ್ಜಿ) ಸದಸ್ಯತ್ವಕ್ಕೂ ಭಾರತದ ಉಮೇದುದಾರಿಕೆಯನ್ನು ಬೆಲರೂಸ್ ಬೆಂಬಲಿಸಿತ್ತು. ಅಲಿಪ್ತ ಚಳವಳಿ ಗುಂಪಿಗೆ ಬೆಲರೂಸ್ ಸದಸ್ಯತ್ವವನ್ನು ಭಾರತ ಬೆಂಬಲಿಸಿತ್ತು.

ಬೆಲರೂಸ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಜಿನೆವಾ ಮತ್ತು ನ್ಯೂಯಾರ್ಕ್ ನಿರ್ಣಯದ ಸಂದರ್ಭದಲ್ಲಿ ಭಾರತ ಬೆಲರೂಸ್ ಅನ್ನು ಬೆಂಬಲಿಸಿತ್ತು. ಬೆಲರೂಸ್ ಭಾರತವನ್ನು ಉದಯೋನ್ಮುಖ ಜಾಗತಿಕ ಶಕ್ತಿ ಎಂದು ಪರಿಗಣಿಸಿದ್ದು ಭಾರತದೊಂದಿಗೆ “ವ್ಯೂಹಾತ್ಮಕ ಸಂಬಂಧ” ಬೆಸೆಯಲು ಪ್ರಯತ್ನಿಸುತ್ತಿದೆ. ಬೆಲರೂಸ್ ಅಧ್ಯಕ್ಷರ ಭಾರತ ಭೇಟಿ ಇದನ್ನು ಪುಷ್ಠಿಕರಿಸಿದೆ.