ಶಾಲಾ ಮಕ್ಕಳನ್ನು  ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ರಕ್ಷಿಸಲು  ಮಾರ್ಗಸೂಚಿ ಕ್ರಮ ಜಾರಿಗೆ ತರಲು ಇಂದು ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲಿರುವ  ಕೇಂದ್ರ ಸರ್ಕಾರ

ಶಾಲಾ ಮಕ್ಕಳನ್ನು ಯಾವುದೇ ರೀತಿಯ ದೈಹಿಕ ಹಾಗೂ ಮಾನಸಿಕ ಕಿರುಕುಳಗಳಿಂದ ರಕ್ಷಣೆ ಒದಗಿಸುವ ಸಂಬಂಧ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಸರ್ಕಾರ ಇಂದು ಉನ್ನತ ಮಟ್ಟದ ಸಭೆಯೊಂದನ್ನು ನವದೆಹಲಿಯಲ್ಲಿ ಆಯೋಜಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಖಾತೆ ಸಚಿವೆ ಮೇನಕಾ ಗಾಂಧಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಜಂಟಿಯಾಗಿ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಎರಡೂ ಸಚಿವಾಲಯಗಳ ಅಧಿಕಾರಿಗಳು, ಮಕ್ಕಳ ಹಕ್ಕುಗಳಿಗಾಗಿನ ರಾಷ್ಟ್ರೀಯ ಆಯೋಗ, ಸಿಬಿಎಸ್‌ಇ, ಎನ್‌ಸಿಇಆರ್‌ಟಿ, ಮತ್ತು ಕೇಂದ್ರೀಯ ವಿದ್ಯಾಲಯ ಸಂಘಟನೆಯ ಅಧಿಕಾರಿಗಳು ಕೂಡಾ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಶಾಲೆಗಳಲ್ಲಿ ಸಹಾಯಕ ಸಿಬ್ಬಂದಿ, ಹಾಗೂ ಬಸ್ ಚಾಲಕರು ಮತ್ತು ನಿರ್ವಾಹಕರಾಗಿ ಮಹಿಳಾ ಉದ್ಯೋಗಿಗಳನ್ನು ನೇಮಿಸುವುದು, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಕುರಿತ ಶಿಕ್ಷಣಾತ್ಮಕ ಚಿತ್ರಗಳನ್ನು ಪ್ರದರ್ಶಿಸುವುದು, ಎನ್‌ಸಿಇಆರ್‌ಟಿ ಪ್ರಕಟಣೆಗಳ ಮೂಲಕ ಪೋಕ್ಸೋ ಇ-ಬಾಕ್ಸ್ ಹಾಗೂ ೧೦೯೮ ಮಕ್ಕಳ ಸಹಾಯವಾಣಿ ಆರಂಭಿಸುವ ಕುರಿತ ಸಲಹೆಗಳನ್ನು ಪರಿಗಣಿಸಬೇಕೆಂದು ಮೇನಕಾ ಗಾಂಧಿ ಅವರು ಹೆಚ್‌ಆರ್‌ಡಿ ಸಚಿವರಿಗೆ ಮನವಿ ಮಾಡಿದ್ದಾರೆ.

ಶಾಲೆಗಳಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಮೇಲಿನ ಲೈಂಗಿಕ ಕಿರುಕುಗಳ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ. ಇತ್ತೀಚೆಗೆ ಗುರುಗ್ರಾಮದಲ್ಲಿ ೭ ವರ್ಷದ ಬಾಲಕನ ಕೊಲೆಯಾಗಿತ್ತು. ಕೊಲೆ ಪ್ರಕರಣವನ್ನು ಸಿಬಿಐನಿಂದ ತನಿಖೆ ನಡೆಸಬೇಕೆಂದು ಬಾಲಕನ ತಂದೆ ಕೋರಿಕೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಮತ್ತು ಮಕ್ಕಳ ಸುರಕ್ಷತೆಯನ್ನು ಖಾತರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ರಚಿಸಬೇಕೆಂದು ಕೇಂದ್ರ, ಹರಿಯಾಣಾ ಸರ್ಕಾರ ಹಾಗೂ ಸಿಬಿಎಸ್‌ಇಗಳಿಗೆ ಸುಪ್ರೀಂ ಕೋರ್ಟ್ ಸೋಮವಾರದಂದು ನೋಟೀಸ್ ಜಾರಿ ಮಾಡಿತ್ತು.