ಸಂಸದರು ಮತ್ತು ಶಾಸಕರ ಮೇಲಿನ ಅಪರಾಧ ಪ್ರಕರಣಗಳ ವಿಚಾರಣೆಯನ್ನು ಶೀಘ್ರ ಇತ್ಯರ್ಥ ಪಡಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು ಶಾಸನ ರಚಿಸುವಂತೆ  ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ.

ಸಂಸದರು ಮತ್ತು ಶಾಸಕರ  ವಿರುದ್ಧ ಕ್ರಿಮಿನಲ್ ಅಪರಾಧಗಳ  ವಿಚಾರಣೆಗಳನ್ನು ಶೀಘ್ರವೇ ಇತ್ಯರ್ಥ ಪಡಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲು  ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಕುರಿತು ಶಾಸನವನ್ನು ಜಾರಿಗೆ ತರುವ ಕುರಿತು  ಪರಿಗಣಿಸುವಂತೆ  ನ್ಯಾಯಾಲಯ ಸೂಚಿಸಿದೆ.

ನ್ಯಾಯಮೂರ್ತಿಗಳಾದ   ಜೆ. ಚಲಮೇಶ್ವರ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನೊಳಗೊಂಡ  ನ್ಯಾಯಪೀಠ,  ಶಾಸಕರು ಮತ್ತು ಸಂಸದರ ವಿರುದ್ಧ ಇರುವ ಕೇಸ್‌ಗಳನ್ನು   ತ್ವರಿತವಾಗಿ ಇತ್ಯರ್ಥ ಪಡಿಸಲು  ಕಾನೂನನ್ನು ರೂಪಿಸುವ ಅಗತ್ಯವಿದೆ ಎಂದು ಹೇಳಿತ್ತು.  

ಶಾಸಕರು ಮತ್ತು ಸಂಸದರು ತಮ್ಮ ಅಧಿಕಾರಾವಧಿಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಕುರಿತು  ತನಿಖೆ ನಡೆಸುವಂತೆ ಶಾಶ್ವತ ಕ್ರಿಯಾವ್ಯವಸ್ಥೆಯನ್ನು ಸ್ಥಾಪಿಸುವಂತೆ  ಸರ್ಕಾರೇತರ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಲಯ  ಈ ಸೂಚನೆ ನೀಡಿದೆ.  

ದೇಶದಲ್ಲಿ  ತ್ವರಿತ ನ್ಯಾಯಾಲಯಗಳ ಸಂಖ್ಯೆ ಹೆಚ್ಚುವ ಅಗತ್ಯವಿದೆ ಎಂದು ಹೇಳಿರುವ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್,  ಹಿಂದೆ ಇಂತಹ ತ್ವರಿತ ನ್ಯಾಯಾಲಯಗಳು  ಉತ್ತಮ ಕೆಲಸ ಮಾಡಿವೆ ಎಂದು ಹೇಳಿದರು.  

ದೇಶಾದ್ಯಂತ ೭ ಸಂಸದರು  ಮತ್ತು ೯೮ ಶಾಸಕರ ಆಸ್ತಿ ಪ್ರಮಾಣ ಅವರ ಅಧಿಕಾರಾವಧಿಯಲ್ಲಿ  ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು  ಮೊನ್ನೆ ಸೋಮವಾರ ಕೇಂದ್ರ  ತೆರಿಗೆ ಇಲಾಖೆ ಸುಪ್ರೀಂ ಕೋರ್ಟ್‌ಗೆ  ತಿಳಿಸಿತ್ತು.  ಈ ರಾಜಕಾರಣಿಗಳ ಆಸ್ತಿ ಸಂಪಾದನೆ ವಿಷಯವನ್ನು  ಗಂಭೀರವಾಗಿ  ತೆಗೆದುಕೊಂಡು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.