ಮುಂಬೈ-ಅಹಮದಾಬಾದ್ ನಡುವಿನ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ; ಉಭಯ ನಾಯಕರು ಗಾಂಧಿನಗರದಲ್ಲಿ ನಡೆಯಲಿರುವ ೧೨ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿ, ಮಾತುಕತೆ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಜಂಟಿಯಾಗಿ ಮುಂಬೈ-ಅಹಮದಾಬಾದ್ ನಡುವಿನ ಹೈಸ್ಪೀಡ್ ಬುಲೆಟ್ ರೈಲು ಯೋಜನೆಗೆ ಇಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಬುಲೆಟ್ ರೈಲು ಸುಮಾರು ೫೦೦ ಕಿಲೋಮೀಟರ್ ದೂರವನ್ನು ಕೇವಲ ಎರಡು ಗಂಟೆಗಳಲ್ಲಿ ತಲುಪಲಿದೆ. ಈ ಯೋಜನೆ ೨೦೨೨ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮೋದಿ ಅವರ ಕಲ್ಪನೆಯ ಈ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಗೆ ಜಪಾನ್ ಸಾಲವನ್ನು ವಿಸ್ತರಿಸಿದೆ. ಉಭಯ ನಾಯಕರು ಗಾಂಧಿನಗರದಲ್ಲಿಂದು ೧೨ನೇ ಭಾರತ-ಜಪನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿ ಮಾತುಕತೆ ನಡೆಸಲಿದ್ದಾರೆ. ನಂತರ ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಜಪಾನ್ ಪ್ರಧಾನಮಂತ್ರಿಗಳ ಈ ಭೇಟಿಯ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಬಂಡವಾಳ ಹೂಡುವ ೧೫ ಒಪ್ಪಂದಗಳಿಗೆ ಸಹಿ ಹಾಕಲಾಗುವುದು ಎಂದು ಆ ರಾಜ್ಯದ ಮುಖ್ಯ ಕಾರ‍್ಯದರ್ಶಿ ಜೆ.ಎನ್. ಸಿಂಗ್ ತಿಳಿಸಿದ್ದಾರೆ.

ಇದಕ್ಕೂ ಮುನ್ನ ನಿನ್ನೆ ಪ್ರಧಾನಿ ನರೇಂದ್ರ ಮೋದಿ,ಶಿಂಜೋ ಅಬೆ ಹಾಗೂ ಅವರ ಪತ್ನಿಯೊಂದಿಗೆ ಆಹಮದಾಬಾದ್‌ನಲ್ಲಿ ೮ ಕಿಲೋಮೀಟರ್ ರೋಡ್ ಶೋ ನಡೆಸಿದರು. ಆಹಮದಾಬಾದ್‌ನ ವಿಮಾನನಿಲ್ದಾಣದಿಂದ ಆರಂಭವಾದ ರೋಡ್ ಶೋ ಸಾಬರಮತಿ ಆಶ್ರಮದ ಬಳಿ ಮುಕ್ತಾಯವಾಯಿತು. ರಸ್ತೆ ಬದಿಯಲ್ಲಿ ೨೮ ಕಡೆ ನಿರ್ಮಿಸಲಾಗಿದ್ದ ವೇದಿಕೆಗಳಲ್ಲಿ ಹಲವು ರಾಜ್ಯಗಳ ಕಲಾವಿದರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಭಾರತದ ಶ್ರೀಮಂತ ಕಲೆಯ ವೈವಿಧ್ಯತೆಯನ್ನು ಪರಿಚಯಿಸಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ೧೨ ವರ್ಷಗಳ ಕಾಲ ನೆಲೆಸಿದ್ದ ಆಶ್ರಮದಲ್ಲಿ ಶಿಂಜೋ ಅಬೆ ಹಾಗೂ ಅವರ ಪತ್ನಿ ಮತ್ತು ಮೋದಿ ಅವರು ಗಾಂಧೀಜಿಗೆ ನಮನ ಸಲ್ಲಿಸಿದ್ದರು.

ಅಲ್ಲದೆ, ಪ್ರಧಾನಿ ಮೋದಿ ಅವರು ಗುಜರಾತಿನ ತಿನಿಸಿಗೆ ಹೆಸರುವಾಸಿಯಾದ ಅಗಶಿಯೆ ರೆಸ್ಟೋರೆಂಟ್‌ನಲ್ಲಿ ಶಿಂಜೋ ಅಬೆ ಮತ್ತು ಅವರ ಪತ್ನಿಗೆ ಔತಣಕೂಟ ಆಯೋಜಿಸಿದ್ದರು.  ಮೋದಿ ಹಾಗೂ ಅಬೆ ಅವರು ೧೬ನೇ ಶತಮಾನದ ಸಿದಿ ಸೈಯದ್ ಮಸೀದಿಗೆ ಭೇಟಿ ನೀಡಿದ್ದರು ಮತ್ತು ಅಲ್ಲಿ ಆಯೋಜಿಸಿದ್ದ ಸಂಗೀತ ರಸ ಸಂಜೆ ಜಲ ತರಂಗ್ ಅಸ್ವಾದಿಸಿದರು. ಎರಡು ದಿನಗಳ ಭಾರತ ಭೇಟಿಗಾಗಿ ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಅವರ ಪತ್ನಿ ನಿನ್ನೆ ಆಹಮದಾಬಾದ್‌ಗೆ ಆಗಮಿಸಿದರು.