2024ರ ಒಲಿಂಪಿಕ್ಸ್ ಆತಿಥ್ಯಕ್ಕೆ ಪ್ಯಾರಿಸ್ ಹಾಗೂ 2028ರ ಆಯೋಜನೆಗೆ ಲಾಸ್‌ಏಂಜಲೀಸ್ ಆಯ್ಕೆ ಮಾಡಿದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ

೨೦೨೪ರ ಒಲಿಂಪಿಕ್ಸ್ ಅನ್ನು ಪ್ಯಾರೀಸ್ ಮತ್ತು ೨೦೨೮ರ ಒಲಿಂಪಿಕ್ಸ್‌ನ ಆತಿಥ್ಯವನ್ನು ಲಾಸ್ ಎಂಜಲೀಸ್ ವಹಿಸಲಿದೆ. ೨೦೨೪ರ ಒಲಂಪಿಕ್ಸ್ ಅನ್ನು ಆಯೋಜಿಸಲು ಎರಡೂ ನಗರಗಳು ಬಯಸಿದ್ದವು, ಆದರೆ ಅಂತಾರಾಷ್ಟ್ರೀಯ ಒಲಂಪಿಕ್ಸ್ ಸಮಿತಿ-ಐಒಸಿ ಲಾಸ್ ಎಂಜಲೀಸ್‌ಗೆ ಇನ್ನೂ ನಾಲ್ಕು ವರ್ಷ ಕಾಯುವುದಾದರೆ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅದು ೨೦೨೮ರವರೆಗೆ ಕಾಯಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಅಧ್ಯಕ್ಷ ಥಾಮಸ್ ಬಾಚ್, ಮತದಾನದಲ್ಲಿ ಎರಡೂ ನಗರಗಳಿಗೆ ಸಮಾನ ಮತಗಳು ಬಂದಿದ್ದವು ಎಂದರು. ೨೦೦೮ ಹಾಗೂ ೨೦೧೨ರಲ್ಲೂ ಪ್ಯಾರೀಸ್‌ಗೆ ಒಲಂಪಿಕ್ಸ್ ಕ್ರೀಡಾಕೂಟ ನಡೆಸುವ ಅವಕಾಶ ಸಿಕ್ಕಿರಲಿಲ್ಲ.  ೨೦೨೪ರ ಒಲಂಪಿಕ್ಸ್ ಕ್ರೀಡೆ ಆಯೋಜನೆಗೆ ನಡೆದ ಸ್ಪರ್ಧೆಯಿಂದ ಹ್ಯಾಂಬರ್ಗ್, ರೋಮ್ ಮತ್ತು ಬುಡಪೇಸ್ಟ್ ಹಿಂದೆ ಸರಿದ ಹಿನ್ನೆಲೆಯಲ್ಲಿ ಅಂತಿಮ ಸುತ್ತಿನಲ್ಲಿ ಪ್ಯಾರೀಸ್ ಮತ್ತು ಲಾಸ್ ಎಂಜಲೀಸ್ ಉಳಿದಿದ್ದವು.