ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜೋತಿ ನೇತೃತ್ವದ ಪೂರ್ಣ ಪ್ರಮಾಣದ ಚುನಾವಣಾ ಆಯೋಗ ಗುಜರಾತ್ ಪ್ರವಾಸದಲ್ಲಿ

ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜೋತಿ ನೇತೃತ್ವದಲ್ಲಿ ಭಾರತೀಯ ಚುನಾವಣಾ ಆಯೋಗದ ಪೂರ್ಣ ಪೀಠ ಗುಜರಾತ್ ಪ್ರವಾಸದಲ್ಲಿದ್ದು, ಅಲ್ಲಿನ ಚುನಾವಣಾ ವೆಚ್ಚ ನಿರ್ವಹಣೆ ಕುರಿತ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದೆ.
ಆ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರೊಂದಿಗೆ ಚುನಾವಣಾ ಆಯೋಗ ಇಂದು ಮಧ್ಯಾಹ್ನ ಸಭೆ ನಡೆಸಲಿದೆ.
ಗುಜರಾತ್‌ನಲ್ಲಿನ ಪರಿಸ್ಥಿತಿ ಹಾಗೂ ಪರಿಶೀಲನೆ ಕುರಿತ ವಿವರವನ್ನು ಆಯೋಗ ಸಂಜೆ ೫ ಗಂಟೆಗೆ ನಿಗದಿಪಡಿಸಿರುವ ಸುದ್ದಿಗೋಷ್ಟಿಯಲ್ಲಿ ನೀಡಲಿದೆ.
ಈ ವರ್ಷಾಂತ್ಯದ ವೇಳೆಗೆ ಗುಜರಾತ್ ವಿಧಾನಸಭೆಗೆ ಚುನಾವಣಾ ದಿನಾಂಕಗಳು ನಿಗದಿಯಾಗಲಿವೆ.
ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜೋತಿ ಅವರೊಂದಿಗೆ ಇಬ್ಬರು ಚುನಾವಣಾ ಆಯುಕ್ತರಾದ ಒ.ಪಿ.ರಾವತ್ ಮತ್ತು ಸುನಿಲ್ ಅರೋರ ನಿನ್ನೆಯೇ ಗಾಂಧಿನಗರ ತಲುಪಿದ್ದಾರೆ.
ಗುಜರಾತ್‌ನಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಕುರಿತು ಆಯೋಗವು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು.