ಡೆಲ್ಲಿ ಮೆಟ್ರೋ ಪ್ರಯಾಣದ ದರ ಇಂದಿನಿಂದ ಹೆಚ್ಚಳ; ೨ ಕಿಲೋಮೀಟರ್‌ವರೆಗಿನ ಪ್ರಯಾಣಕ್ಕೆ ಕನಿಷ್ಠ ೧೦ ರೂಪಾಯಿ ಹಾಗೂ ೩೨ ಕಿಲೋಮೀಟರ್ ನಂತರದ ಪ್ರಯಾಣಕ್ಕೆ ಗರಿಷ್ಠ ೬೦ ರೂಪಾಯಿ ನಿಗದಿ

ಡೆಲ್ಲಿ ಮೆಟ್ರೋ ಇಂದಿನಿಂದ ಪ್ರಯಾಣ ದರದಲ್ಲಿ ಹೆಚ್ಚಳ ಮಾಡಿದೆ. ನಿನ್ನೆ ರಾತ್ರಿ ಸಭೆ ಸೇರಿದ್ದ ಡೆಲ್ಲಿ ಮೆಟ್ರೋ ರೈಲು ನಿಗಮ, ದರ ನಿಗದಿ ಸಮಿತಿ ಶಿಫಾರಸ್ಸುಗಳನ್ನು ಆಧರಿಸಿ ಪ್ರಯಾಣ ದರ ಹೆಚ್ಚಿಸುವ ನಿರ್ಧಾರ ಕೈಗೊಂಡಿತು.
ಪರಿಷ್ಕೃತ ದರ ಅನ್ವಯ ೨ ಕಿಲೋಮೀಟರ್‌ವರೆಗೆ ೧೦ ರೂಪಾಯಿ, ೨ ರಿಂದ ೫ ಕಿಲೋಮೀಟರ್‌ವರೆಗೆ ೨೦ ರೂಪಾಯಿ, ೫ ರಿಂದ ೧೨ ಕಿಲೋಮೀಟರ್ ವರೆಗೆ ೩೦ ರೂಪಾಯಿ, ೧೨ ರಿಂದ ೨೧ ಕಿಲೋಮೀಟರ್ ವರೆಗೆ ೪೦ ರೂಪಾಯಿ, ೨೧ ರಿಂದ ೩೨ ಕಿಲೋಮೀಟರ್ ವರೆಗೆ ೫೦ ರೂಪಾಯಿ ಹಾಗೂ ೩೨ ಕಿಲೋಮೀಟರ್ ನಂತರದ ಪ್ರಯಾಣಕ್ಕೆ ೬೦ ರೂಪಾಯಿ ನಿಗದಿಪಡಿಸಲಾಗಿದೆ.
ಐದು ತಿಂಗಳ ಹಿಂದೆ ಡೆಲ್ಲಿ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಲಾಗಿತ್ತು. ಇದೀಗ ೫ ಕಿಲೋಮೀಟರ್ ನಂತರದ ಎಲ್ಲಾ ಹಂತದ ಪ್ರಯಾಣಕ್ಕೆ ತಲಾ ೧೦ ರೂಪಾಯಿ ಹೆಚ್ಚಳ ಮಾಡಲಾಗಿದೆ.
ಸ್ಮಾರ್ಟ್ ಕಾರ್ಡ್ ಬಳಕೆದಾರರು ಪ್ರತಿ ಪ್ರಯಾಣಕ್ಕೆ ಶೇಕಡ ೧೦ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಪ್ರಯಾಣಿಕರ ದಟ್ಟಣೆ ಅವಧಿಯನ್ನು ಹೊರತು ಪಡಿಸಿ ಬೇರೆ ಸಮಯದ ಪ್ರಯಾಣಕ್ಕೂ ಸ್ಮಾರ್ಟ್ ಕಾರ್ಡ್ ಬಳಕೆದಾರರು ಶೇಕಡ ೧೦ರಷ್ಟು ಹೆಚ್ಚುವರಿ ರಿಯಾಯಿತಿಯನ್ನು ಪಡೆಯಲಿದ್ದಾರೆ.
ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ – ಆರೆಂಜ್ ಮಾರ್ಗದಲ್ಲಿನ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.