ನಾನಾಜಿ ದೇಶ್‌ಮುಖ್ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ದೆಹಲಿಯಲ್ಲಿ ಇಂದು ಉದ್ಘಾಟಿಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ; ಗ್ರಾಮೀಣ ಮತ್ತು ಸ್ಥಳೀಯ ಅಭಿವೃದ್ಧಿಗೆ ಸಂಬಂಧಪಟ್ಟ ಅನೇಕ ಯೋಜನೆಗಳಿಗೆ ಚಾಲನೆ

ದೆಹಲಿಯಲ್ಲಿ ಇಂದು ನಡೆಯಲಿರುವ ನಾನಾಜಿ ದೇಶ್ ಮುಖ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಅಲ್ಲಿ ಅವರು ಗ್ರಾಮೀಣ ಮತ್ತು ಸ್ಥಳೀಯ ಅಭಿವೃದ್ಧಿಗೆ ಸಂಬಂಧಪಟ್ಟ ವಿವಿಧ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ನಾನಾಜಿ ದೇಶ್ ಮುಖ್ ಅವರ ಸ್ಮರಣ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳ ಉಸ್ತುವಾರಿ ಮತ್ತು ಸಮನ್ವಯ ನೋಡಿಕೊಳ್ಳುವ ಪೋರ್ಟಲ್‌ನ್ನು ಪ್ರಧಾನಿಯವರು ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿರುವ ಬಗ್ಗೆ ಮಾಹಿತಿ ನೀಡುವ ಗ್ರಾಮ ಸಂವಾದ ಆಪ್ ನ್ನು ಬಿಡುಗಡೆ ಮಾಡಲಿದ್ದಾರೆ. ಮಾಹಿತಿ ಮೂಲಕ ಸಬಲೀಕರಣ ಎಂಬ ಉದ್ದೇಶದಿಂದ ಈ ಆಪ್‌ನ್ನು ವಿನ್ಯಾಸಗೊಳಿಸಲಾಗಿದೆ.
ತಂತ್ರಜ್ಞಾನ ಮತ್ತು ಗ್ರಾಮೀಣ ಬದುಕಿನ ಚಿತ್ರಣ ತೋರಿಸುವ ೧೦೦ಕ್ಕೂ ಹೆಚ್ಚು ಉತ್ತಮ ಅಭ್ಯಾಸಗಳು ಮತ್ತು ಆಚರಣೆಗಳ ಕುರಿತ ಪ್ರದರ್ಶನವನ್ನು ಪ್ರಧಾನಿ ವೀಕ್ಷಿಸಲಿದ್ದಾರೆ. ಸ್ವ ಸಹಾಯ ಗುಂಪುಗಳು, ಪಂಚಾಯತ್‌ಗಳು, ನೀರಿನ ಸಂರಕ್ಷಣೆ ಕುರಿತು ಪ್ರಯೋಗಗಳನ್ನು ನಡೆಸುವವರು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳನ್ನುದ್ದೇಶಿಸಿ ಪ್ರಧಾನಿಯವರು ಭಾಷಣ ಮಾಡಲಿದ್ದಾರೆ.