ಎರಡು ದಿನಗಳ ರಾಜ್ಯಪಾಲರ ಸಮಾವೇಶಕ್ಕೆ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಇಂದು ಚಾಲನೆ.

ರಾಷ್ಟ್ರಪತಿ ಭವನದಲ್ಲಿ ಇಂದಿನಿಂದ ನಡೆಯಲಿರುವ ಎರಡು ದಿನಗಳ ರಾಜ್ಯಪಾಲರುಗಳ ಸಮಾವೇಶವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಉದ್ಘಾಟಿಸಲಿದ್ದು, ಈ ಸಮಾವೇಶದಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ನವಭಾರತ ೨೦೨೨ ರ ವಿಷಯವಾಗಿ ಇಂದು ಚರ್ಚೆ ನಡೆಯಲಿದ್ದು, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿ ಸಮಾವೇಶದಲ್ಲಿ ಪಾಲ್ಗೊಳ್ಳುವರು.

೨೭ ರಾಜ್ಯಪಾಲರುಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಮೂವರು ಉಪ ರಾಜ್ಯಪಾಲರು, ಕೇಂದ್ರ ಸಚಿವರು ಹಾಗೂ ನೀತಿ ಆಯೋಗದ ಉಪಾಧ್ಯಕ್ಷರು, ಕಾರ್ಯಾಧ್ಯಕ್ಷರು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ.