ಖಾಸಗಿತನದ ಹಕ್ಕು ಕುರಿತಂತೆ ಸುಪ್ರೀಂ ಕೋರ್ಟ್ ಆದೇಶದಿಂದ ಆಧಾರ್ ಹೊರತು – ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ.

ಖಾಸಗೀತನದ ಹಕ್ಕು ಕುರಿತಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಆಧಾರ್‌ನ್ನು ಹೊರತುಪಡಿಸಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಇತ್ತೀಚಿನ ಆದೇಶದಿಂದ ಆಧಾರ್ ಯೋಜನೆ ಮೇಲಾಗುವ ಪರಿಣಾಮ ಕುರಿತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅವರು ಪ್ರತಿಕ್ರಿಯೆ ನೀಡಿ, ಪ್ರಸಕ್ತ ಸಂದರ್ಭದಲ್ಲಿ ಆಧಾರ್ ಕುರಿತ ಸುಪ್ರೀಂ ಕೋರ್ಟ್ ಆದೇಶ ಸರಿಯಾಗಿದೆ. ಆದರೆ ಖಾಸಗಿ ಹಕ್ಕು ಕಾನೂನು ವ್ಯಾಪ್ತಿಯಿಂದ ಕೆಲವು ಅಂಶಗಳನ್ನು ಹೊರತುಪಡಿಸುವ ಬಗ್ಗೆಯೂ ಕೆಲವು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಈ ವ್ಯಾಪ್ತಿಯಿಂದ ರಾಷ್ಟ್ರೀಯ ಸುರಕ್ಷತೆ ವಿಷಯನ್ನು ಹೊರತುಪಡಿಸುವ ಬಗ್ಗೆ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.  ಅಲ್ಲದೆ ಅಪರಾಧತಡೆ, ಸಾಮಾಜಿಕ-ಆರ್ಥಿಕ ಸೌಲಭ್ಯ ವಿತರಣೆ ವಿಷಯಗಳನ್ನು ಸಹ ಹೊರತುಪಡಿಸಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.  ಮೂರನೇ ಅಂಶದ ಅಡಿಯಲ್ಲಿ ಆಧಾರ್ ಕೂಡ ಸೇರಿದೆ ಎಂದರು.

ಆಧಾರ್ ಕಾನೂನಿನಲ್ಲಿ ಅಂಕಿ-ಅಂಶ ಸುರಕ್ಷತೆ ಮತ್ತು ಇದರ ಉಲ್ಲಂಘನೆ ಮಾಡಿದಲ್ಲಿ ಎದುರಿಸಬೇಕಾದ ಪರಿಣಾಮಗಳ ಬಗ್ಗೆ ವಿವರವಾದ ಉಲ್ಲೇಖ ಇದೆ.  ಈ ಎಲ್ಲಾ ಅಂಶಗಳನ್ನು ಒಳಗೊಂಡ ಅತ್ಯಂತ ಸುರಕ್ಷಿತ ಕಾನೂನನ್ನು ಜಾರಿಗೊಳಿಸಲಾಗಿದೆ.  ಸುಪ್ರೀಂ ಕೋರ್ಟ್ ಆದೇಶ ಆಧಾರ್ ಯೋಜನೆಗೆ ಹಿನ್ನೆಡೆ ಎಂಬ ವ್ಯಾಖ್ಯಾನ ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.