ಶಿಕ್ಷಕರು ಹಾಗೂ ವಿಶ್ವವಿದ್ಯಾಲಯಗಳ ಅಕೆಡೆಮಿಕ್ ಸಿಬ್ಬಂದಿ, ತಾಂತ್ರಿಕ ಸಂಸ್ಥೆ ಮತ್ತು ಕಾಲೇಜುಗಳ ಬೋಧಕ ಸಿಬ್ಬಂದಿಗೆ ೭ನೇ ವೇತನ ಆಯೋಗದ ಸೌಲಭ್ಯ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿ; ಕೌಶಲ್ಯ ಅಭಿವೃದ್ಧಿಯ ಎರಡು ಯೋಜನೆಗಳಿಗೆ ಸಹ ಸಂಪುಟ ಅಂಗೀಕಾರ.

ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ ಅಕೆಡೆಮಿಕ್ ಸಿಬ್ಬಂದಿ, ತಾಂತ್ರಿಕ ಸಂಸ್ಥೆಗಳು ಮತ್ತು ಅನುದಾನಿತ ಕಾಲೇಜುಗಳ ಸಿಬ್ಬಂದಿಗೆ ೭ನೇ ವೇತನ ಆಯೋಗದ ಸೌಲಭ್ಯ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ.

೨೦೧೬ ರ ಜನವರಿ ಒಂದರಿಂದಲೇ ನೂತನ ವೇತನ ಮತ್ತು ಸೌಲಭ್ಯ ಹೆಚ್ಚಳ ಅನ್ವಯವಾಗಲಿದೆ.  ಇದರಿಂದ ಕೇಂದ್ರೀಯ ಬೊಕ್ಕಸಕ್ಕೆ ೯ ಸಾವಿರದ ೮೦೦ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ.  ಸುಮಾರು ೭.೫ ಲಕ್ಷ ಬೋಧಕ ಸಿಬ್ಬಂದಿಗೆ ಈ ವೇತನ ಹೆಚ್ಚಳ ಸೌಲಭ್ಯ ದೊರೆಯಲಿದೆ.

ಈ ಕುರಿತು ದೆಹಲಿಯಲ್ಲಿ ನಿನ್ನೆ ವಿವರ ನೀಡಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ಅಧ್ಯಾಪಕರ ಸಂಬಳ ೧೦ ಸಾವಿರದಿಂದ ೫೦ ಸಾವಿರ ರೂಪಾಯಿಯವರೆಗೆ ಏರಿಕೆಯಾಗಲಿದೆ. ಐಐಟಿ, ಐಐಎಂ, ಐಐಐಟಿ ಮತ್ತು ಇತರ ಕೇಂದ್ರೀಯ ಸಂಸ್ಥೆಗಳ ಬೋಧಕ ಸಿಬ್ಬಂದಿಗೂ ವೇತನ ಹೆಚ್ಚಳವಾಗಲಿದೆ ಎಂದರು.

ಬೋಧಕ ಸಿಬ್ಬಂದಿಗೆ ನ್ಯಾಯಯುತ ವೇತನ ನೀಡಲು ಮತ್ತು ಪ್ರತಿಭಾವಂತರನ್ನು ಆಕರ್ಷಿಸಲು ಈ  ನಿರ್ಧಾರ ನೆರವಾಗಲಿದೆ.  ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿರುವ ಖಾಲಿ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡಲಾಗುವುದು ಎಂದು ಸಚಿವ ಜಾವಡೇಕರ್ ತಿಳಿಸಿದರು.