ಜಮ್ಮು ಮತ್ತು ಕಾಶ್ಮೀರದಲ್ಲಿನ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿನ ಜನರ ಜೀವನ ಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಲಹೆ ನೀಡುವಂತೆ ನಾಗರಿಕ ಆಡಳಿತ, ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ಪಡೆಗಳಿಗೆ ಕೇಂದ್ರ ಸೂಚನೆ.

ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಜನರ ಜೀವನಮಟ್ಟ ಸುಧಾರಣೆ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಸೂಕ್ತ ಸಲಹೆ ನೀಡುವಂತೆ ನಾಗರಿಕ ಆಡಳಿತ, ಮಿಲಿಟರಿ ಮತ್ತು ಪ್ಯಾರಾಮಿಲಿಟರಿ ಪಡೆಗಳಿಗೆ ಕೇಂದ್ರ ಸೂಚಿಸಿದೆ.

ಜಮ್ಮುವಿನಲ್ಲಿ ನಿನ್ನೆ ಸಂಜೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಗೃಹ ಸಚಿವಾಲಯದ ಆಂತರಿಕ ಭದ್ರತೆಯ ವಿಶೇಷ ಕಾರ್ಯದರ್ಶಿ ರಿನಾ ಮಿತ್ರಾ ಈ ಸಲಹೆ ನೀಡಿದ್ದಾರೆ ಎಂದು ಅಧಿಕೃತ ವಕ್ತಾರ ಹೇಳಿದ್ದಾರೆ.

ಗಡಿ ಭಾಗದಲ್ಲಿ ವಾಸಿಸುತ್ತಿರುವ ಜನರು ಮುಕ್ತವಾಗಿ ಜೀವಿಸಲು ಹಾಗೂ ಅವರ ಜೀವನ ಮಟ್ಟ ಸುಧಾರಿಸಲು ನಾಗರಿಕ ಆಡಳಿತ, ಮಿಲಿಟರಿ, ಬಿಎಸ್ ಎಫ್ ಮತ್ತು ಸಿಆರ್ ಪಿಎಫ್‌ನ ಅಧಿಕಾರಿಗಳು ಸೂಕ್ತ ಸಲಹೆ ನೀಡುವಂತೆ ಮಿತ್ರಾ ಕೋರಿದ್ದಾರೆ.

ಪಾಕಿಸ್ತಾನ ಕಡೆಯಿಂದ ಗಡಿ ಭಾಗದಲ್ಲಿ ನಿರಂತರ ಗುಂಡಿನ ದಾಳಿ ನಡೆಯುತ್ತಿರುವುದರಿಂದ ಗಡಿ ಭಾಗದ ನಿವಾಸಿಗಳು ಭಯಭೀತಗೊಂಡಿರುವ ಹಿನ್ನೆಲೆಯಲ್ಲಿ ಮಿತ್ರಾ ನೇತೃತ್ವದ ತಂಡ ಗಡಿ ಭಾಗಕ್ಕೆ ಭೇಟಿ ನೀಡಿದೆ.

ಇದಲ್ಲದೆ ಜಮ್ಮು, ಸಂಬಾ, ಕಥುವಾ, ರಜೌರಿ ಮತ್ತು ಪೂಂಚ್ ಜಿಲ್ಲೆಗಳ ಭೇಟಿ ವೇಳೆಯ ಅಲ್ಲಿನ ನಿವಾಸಿಗಳ ಬಗ್ಗೆಯ ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.