ಇರಾನ್ ಮತ್ತು ಇರಾಕ್‌ನ ಉತ್ತರ ಗಡಿ ಭಾಗದಲ್ಲಿ ೭.೩ ತೀವ್ರತೆಯ ಪ್ರಬಲ ಭೂಕಂಪ – ಕನಿಷ್ಠ ೧೬೦ ಮಂದಿ ಸಾವು

ಇರಾನ್ ಮತ್ತು ಇರಾಕ್ ನಡುವಿನ ಉತ್ತರ ಗಡಿ ಭಾಗದಲ್ಲಿ ೭.೩ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಸುಮಾರು ೧೬೦ ಜನ ಮೃತಪಟ್ಟಿದ್ದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸುಲೈಮಾನಿಯಾ ಪ್ರಾಂತ್ಯದಲ್ಲಿ ೩೦ ಮಂದಿ ಮೃತಪಟ್ಟಿದ್ದು ಅನೇಕರು ಗಾಯಗೊಂಡಿದ್ದಾರೆ. ಈ ಸಂಖ್ಯೆಗಳು ಹೆಚ್ಚುವ ಸಾಧ್ಯತೆ ಇದೆ.

ದೇಶದ ಪಶ್ಚಿಮ ಭಾಗಕ್ಕೆ ರಕ್ಷಣಾಪಡೆ ತೆರಳಿದೆ ಎಂದು ಇರಾನ್‌ನ ಸುದ್ದಿ ವಾಹಿನಿ ಐಆರ್‌ಐಎನ್‌ಎನ್ ವರದಿ ಮಾಡಿದೆ.

ಕುರ್ದಿಷ್ ಪಟ್ಟಣ ಸುಲೈಮಾನಿಯಾದಿಂದ ೧೦೩ ಕಿಲೋಮೀಟರ್ ಆಗ್ನೇಯ ಭಾಗದಲ್ಲಿ ೩೩.೯ ಕಿಲೋಮೀಟರ್ ಆಳದಲ್ಲಿ ನಿನ್ನೆ ಭೂಕಂಪ ಸಂಭವಿಸಿತು ಎಂದು ಅಮೆರಿಕ ಭೂರ್ಗಭ ಸರ್ವೇಕ್ಷಣಾಲಯ ತಿಳಿಸಿದೆ.

ಟರ್ಕಿ, ಕುವೈತ್, ಅರ‍್ಮೇನಿಯಾ, ಜೋರ್ಡಾನ್, ಲೆಬ್ನಾನ್, ಸೌದಿ ಅರೇಬಿಯಾ, ಕತಾರ್ ಮತ್ತು ಬಹ್ರೇನ್‌ಗಳಲ್ಲೂ ಕಂಪನದ ಅನುಭವವಾಗಿದೆ.