ಆಸಿಯಾನ್ ಶೃಂಗ ಸಭೆಯ ನೇಪಥ್ಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಡುಟೆರ್ಟ್ ಜತೆ ಪ್ರಧಾನಮಂತ್ರಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಡುಟೆರ್ಟ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಪಿಲಿಪ್ಪೀನ್ಸ್‌ನ ರಾಜಧಾನಿ ಮನಿಲಾದಲ್ಲಿ ನಡೆಯುತ್ತಿರುವ ಆಸಿಯಾನ್ ಶೃಂಗಸಭೆಯ ನೇಪಥ್ಯದಲ್ಲಿ ನಡೆದ ಸಭೆಯಲ್ಲಿ ಮೋದಿ ಅವರು ಟ್ರಂಪ್ ಮತ್ತು ರೊಡ್ರಿಗೊ ಜತೆ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು.

ಉತ್ತರ ಕೊರಿಯಾದಲ್ಲಿ ಇತ್ತೀಚೆಗೆ ನಡೆಸಲಾದ ಅಣ್ವಸ್ತ್ರ ಪರೀಕ್ಷೆ, ಕೊಲ್ಲಿ ರಾಷ್ಟ್ರದಲ್ಲಿ ಆರ್ಥಿಕ ಹಿನ್ನಡೆ, ತೈಲ ಕೊರತೆ, ಮ್ಯಾನ್ಮರ್‌ನಲ್ಲಿನ ರೊಹಿಂಗ್ಯಾ ನಿರಾಶ್ರಿತರ ಕುರಿತು ಮೋದಿ ಅವರು ಟ್ರಂಪ್ ಜತೆ ಸಮಾಲೋಚನೆ ನಡೆಸಿದರು.

ಭಯೋತ್ಪಾದನೆ ನಿಗ್ರಹ, ಅಣ್ವಸ್ತ್ರ ಸೇರಿದಂತೆ ಹಲವಾರು ವಿಷಯ ಹಾಗೂ ಆಫ್ಘಾನಿಸ್ತಾನದಲ್ಲಿ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಿದರು.

ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಅವರ ಜತೆ ರಾಷ್ಟ್ರೀಯ ಭದ್ರತಾ ಸಲಹೆಗಾರ, ವಿದೇಶಾಂಗ ವ್ಯವಹಾರ ಇಲಾಖೆ ಕಾರ್ಯದರ್ಶಿ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಪಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೊ ಜತೆ ಮಾತುಕತೆ ನಡೆಸಿದ ಮೋದಿ, ಭಯೋತ್ಪಾದನೆ ನಿಗ್ರಹ, ವ್ಯಾಪಾರ, ವಹಿವಾಟು ವೃದ್ಧಿ ಕುರಿತು ಸಮಾಲೋಚನೆ ನಡೆಸಿದರು. ರಕ್ಷಣೆ, ಕೃಷಿ, ಸಣ್ಣ, ಅತಿ ಸಣ್ಣ, ಮಧ್ಯಮ ಹಾಗೂ ಭಾರಿ ಕೈಗಾರಿಕೆ ಕ್ಷೇತ್ರಗಳಲ್ಲೂ ದ್ವಿಪಕ್ಷೀಯ ಸಹಕಾರ ವೃದ್ಧಿ ಕುರಿತು ಮೋದಿ ಮತ್ತು ರೊಡ್ರಿಗೊ ಮಾತುಕತೆ ನಡೆಸಿದರು.