ಓಖಿ ಚಂಡಮಾರುತದ ಹಿನ್ನೆಲೆ ; ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಕಟ್ಟೆಚ್ಚರ – ಮುಂಬೈ ಅಸುಪಾಸಿನಲ್ಲಿ ಹಗುರ ಮಳೆಯಾಗುತ್ತಿರುವ ಕಾರಣ ಮುನ್ನೆಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ.

ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ಕರಾವಳಿಯಲ್ಲಿ ಓಖಿ ಚಂಡಮಾರುತದ ಪ್ರಭಾವದಿಂದಾಗಿ ಕಟ್ಟೆಚ್ಚರ ಘೋಷಿಸಲಾಗಿದೆ. ನಾಳೆ ಬೆಳಗಿನವರೆಗೆ ಈ ಭಾಗದಲ್ಲಿ ತೀವ್ರ ಕಠಿಣ ಪರಿಸ್ಥಿತಿ ಇರಲಿದೆ.

ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ಅಲ್ಲಲ್ಲಿ ಹಾಗೂ ಉತ್ತರ ಕೊಂಕಣ್ ನ ಕೆಲವೆಡೆ ಭಾರೀ ಮಳೆಯಾಗಲಿದೆ ಮತ್ತು ಕೆಲೆವೆಡೆ ಸಾಧಾರಣ ಮಳೆಯಾಗಲಿದೆ ಎಂದು ಭೂವಿಜ್ಞಾನ ಸಚಿವಾಲಯ ಮುನ್ಸೂಚನೆ ನೀಡಿದೆ.

ಕಡಲ ಭಾಗದಲ್ಲಿ ಪ್ರಬಲ ಬಿರುಗಾಳಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಓಖಿ ಚಂಡಮಾರುತದಿಂದಾಗಿ ಹವಾಮಾನ ಪರಿಸ್ಥಿತಿ ಹದಗೆqಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈ ಮತ್ತು ಸುತ್ತಮುತ್ತಲ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಮಹಾರಾಷ್ಟ್ರ ಸರ್ಕಾರ ಇಂದು ರಜೆ ಘೋಷಿಸಿದೆ.

ಭಾರೀ ಗಾಳಿ ಬೀಸಲಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರದ ತೀರದಲ್ಲಿ ವಿಹಾರ ಕೈಗೊಳ್ಳದಂತೆ ಬ್ರಿಹನ್ ಮುಂಬೈ ನಗರ ಪಾಲಿಕೆಯ ವಿಪತ್ತು ನಿರ್ವಹಣಾ ಘಟಕ ಸೂಚಿಸಿದೆ. ಹವಾಮಾನ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಪಶ್ಚಿಮ ರೈಲ್ವೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

ಇನ್ನೆರಡು ದಿನ ಅಂಡಮಾನ್- ನಿಕೋಬಾರ್ ದ್ವೀಪದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಮೀನುಗಾರರು ನಾಳೆವರೆಗೂ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನಾಡಿದ್ದು ಗುರುವಾರದವರೆಗೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕರಾವಳಿ ಪ್ರದೇಶಲ್ಲೂ ಮೀನುಗಾರರು ಸಮುದ್ರಕ್ಕಿಳಿಯಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.