ಉದ್ದೀಪನ ಮದ್ದು ಕಾರ್ಯಕ್ರಮ ಜಾರಿಗೊಳಿಸಿದ ಕಾರಣಕ್ಕಾಗಿ ಮುಂದಿನ ವರ್ಷ ನಡೆಯಲಿರುವ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಕ್ಕೆ  ರಷ್ಯಾಗೆ ನಿಷೇಧ

ಮುಂದಿನ ವರ್ಷ ನಡೆಯಲಿರುವ ಚಳಿಗಾಲದ ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟದಿಂದ ರಷ್ಯಾ ದೇಶವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಷೇಧಿಸಿದೆ. ರಷ್ಯಾದಲ್ಲಿ ಜಾರಿಗೆ ತರಲಾಗಿರುವ ಉದ್ದೀಪನ ಮದ್ದು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಆದಾಗ್ಯೂ ರಷ್ಯಾದ ಕ್ರೀಡಾಪಟುಗಳಿಗೆ ತಮ್ಮ ದೇಶದ ಬದಲಿಗೆ ಒಲಿಂಪಿಕ್ ಧ್ವಜದ ಅಡಿಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.

ದಕ್ಷಿಣ ಕೋರಿಯಾದ ಪೆಂಗ್‌ಚಾಂಗ್‌ನಲ್ಲಿ ಚಳಿಗಾಲದ ಕ್ರೀಡಾ ಕೂಟ ಆರಂಭವಾಗಲು ೬೫ ದಿನಗಳು ಬಾಕಿ ಇರುವಂತೆಯೇ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಉದ್ದೀಪನ ಮದ್ದು ಸೇವಿಸಿ ವಂಚಿಸುವ ಪ್ರಕರಣಗಳನ್ನು ಸಮಿತಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

ಕ್ರೀಡೆಯ ಸಮಗ್ರತೆಗೆ ಧಕ್ಕೆ ತರಲು ಯತ್ನಿಸಿರುವ ರಷ್ಯಾದ ಕ್ರಮವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟದ ಅಧ್ಯಕ್ಷ ಥಾಮಸ್ ಬಚ್ ಟೀಕಿಸಿದ್ದಾರೆ. ಉದ್ದೀಪನಾ ಮದ್ದು ವಿರೋಧಿ ಸಂಸ್ಥೆ ಹಾಗೂ ಐಓಸಿಯ ಎರಡು ತನಿಖಾ ತಂಡಗಳು ರಷ್ಯಾದ ಅಥ್ಲಿಟ್‌ಗಳು ಉದ್ದೀಪನಾ ಮದ್ದು ಸೇವಿಸಿ ವಂಚಿಸುತ್ತಿರುವುದಾಗಿ ವರದಿ ಸಲ್ಲಿಸಿತ್ತು.