ಓಖಿ ಚಂಡಮಾರುತ ದುರ್ಬಲವಾಗುತ್ತಿದ್ದು, ಗುಜರಾತ್‌ನ ಸೂರತ್ ಕರಾವಳಿ ಪ್ರದೇಶಕ್ಕೆ  ಅಪ್ಪಳಿಸುವ ನಿರೀಕ್ಷೆ ಹುಸಿಯಾಗಿದೆ ; ಪರಿಸ್ಥಿತಿ ಎದುರಿಸಲು ಗುಜರಾತ್ ಆಡಳಿತದಿಂದ ಎಲ್ಲ ಸಿದ್ಧತೆ.

ವಾಯುಭಾರ  ಒತ್ತಡದಿಂದಾಗಿ ಓಖಿ ಚಂಡಮಾರುತ  ದುರ್ಬಲಗೊಳ್ಳುತ್ತಿದೆ. ಗುಜರಾತ್‌ನ ಸೂರತ್ ಕರಾವಳಿ ಪ್ರದೇಶಕ್ಕೆ  ಚಂಡಮಾರುತ ಅಪ್ಪಳಿಸುವ ನಿರೀಕ್ಷೆ ಹುಸಿಯಾಗಿದೆ.

ಅಹಮದಾಬಾದ್‌ನಲ್ಲಿರುವ  ಹವಾಮಾನ ಇಲಾಖೆ ಈ ಮಾಹಿತಿ ನೀಡಿದ್ದು, ಚಂಡಮಾರುತದ ಬಿರುಗಾಳಿ ತೀವ್ರ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗಿದೆ. ವಾಯುಭಾರ ಒತ್ತಡ ಮಂದಗತಿಯಲ್ಲಿ ಸಾಗಿದರೆ ಮಾತ್ರ ಚಂಡಮಾರುತ ದಕ್ಷಿಣ ಗುಜರಾತ್‌ಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಭಾರತೀಯ  ಹವಾಮಾನ ಇಲಾಖೆ ಪ್ರಕಾರ ಚಂಡಮಾರುತ ಪೂರ್ವ ಕೇಂದ್ರ ಅರಬ್ಬಿ ಸಮುದ್ರದತ್ತ ಪ್ರತಿ ಗಂಟೆಗೆ ೧೮ ಕಿಲೋಮೀಟರ್ ವೇಗದಲ್ಲಿ ಧಾವಿಸಿದೆ.  ಇದು ಸೂರತ್‌ನ ದಕ್ಷಿಣದ ನೈಋತ್ಯ ದಿಕ್ಕಿನಿಂದ ೨೪೦ ಕಿಲೋಮೀಟರ್ ಹಾಗೂ ಮುಂಬೈನ  ಈಶಾನ್ಯ ಭಾಗದಿಂದ ೧೫೦ ಕಿಲೋಮೀಟರ್ ದೂರದಲ್ಲಿದೆ.

ಈ ಮಧ್ಯೆ, ಪರಿಸ್ಥಿತಿಯನ್ನು ಎದುರಿಸಲು ಗುಜರಾತ್ ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ.

ಭದ್ರತಾ ಪಡೆ, ಸೇನೆ, ನೌಕಾಪಡೆ, ಕರಾವಳಿ ಕಾವಲು ಪಡೆ, ರಾಷ್ಟ್ರೀಯ ವಿಪತ್ತು ಪರಿಹಾರ  ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದ್ದು,  ಪರಿಸ್ಥಿತಿ ಎದುರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ  ಬಹುತೇಕ ಕಡೆಗಳಲ್ಲಿ ನಿನ್ನೆ ಬೆಳಗ್ಗೆಯಿಂದಲೇ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಿದೆ.

ಉತ್ತರ ಕೊಂಕಣ ಭಾಗದಲ್ಲಿ  ಇಂದು ಮುಂಜಾನೆವರೆಗೆ  ಭಾರಿ ಮಳೆಯಾಗಿದೆ. ಮುಂದಿನ ೧೮ ಗಂಟೆಗಳ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚ್ಚರಿಕೆ  ನೀಡಲಾಗಿದೆ.

ದೇಶದ ಹಲವೆಡೆಗಳಲ್ಲಿ ತಲೆದೋರಿರುವ ಓಖಿ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತಾವು ನಿರಂತರವಾಗಿ ಪರಿಶೀಲಿಸುತ್ತಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.