ಪ್ರತಿಕೂಲ ಹವಾಮಾನದಿಂದಾಗಿ ನಿನ್ನೆ ಕೆಲ ಚುನಾವಣಾ ರ‍್ಯಾಲಿ ರದ್ಧತಿಯ ನಡುವೆಯೂ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರ ಇಂದು ತಾರಕಕ್ಕೇರಲಿದೆ.

ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ  ಚುನಾವಣಾ ಪ್ರಚಾರದ ರಂಗು ಇಂದು  ತಾರಕಕ್ಕೇರಲಿದೆ.  ನಿನ್ನೆ ನಿಗದಿಯಾಗಿದ್ದ ಹಲವು ಚುನಾವಣಾ ರ‍್ಯಾಲಿಗಳು ಹವಾಮಾನ ವೈಪರೀತ್ಯದಿಂದಾಗಿ ರದ್ದಾಗಿದ್ದವು.   ಪ್ರಚಾರದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಇಂದು ಧಾಂಡೂಕಾ, ದಾಹೋದ್, ಮತ್ತು ನೇತ್ರಾಂಗ್‌ಗಳಲ್ಲಿ  ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.   ಓಕ್ಹಿ ಚಂಡಮಾರುತದ ಪರಿಣಾಮದಿಂದಾಗಿ ಸೂರತ್‌ನಲ್ಲಿ ಇಂದು ನಿಗದಿಯಾಗಿದ್ದ ಚುನಾವಣಾ ರ‍್ಯಾಲಿಯನ್ನು ನಾಳೆಗೆ ಮುಂದೂಡಲಾಗಿದೆ.  ಭಾರತೀಯ ಜನತಾ ಪಾರ್ಟಿಯ ಇತರ ತಾರಾ ಪ್ರಚಾರಕರಾದ ಪಕ್ಷದ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಉಮಾಭಾರತಿ , ಪರಸೋತ್ತಮ್ ರೂಪಾಲಾ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಇಂದು  ಮತ ಯಾಚಿಸಲಿದ್ದಾರೆ.

ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ನರ್ಮದಾ, ದಾಂಗ್, ಮತ್ತು ತಪಿ ಜಿಲ್ಲೆಗಳಲ್ಲಿ ನಾಲ್ಕು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೊದಲ ಹಂತದ  ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ನಾಳೆ  ತೆರೆ ಬೀಳಲಿದ್ದು  ಶನಿವಾರ ಮತದಾನ ನಡೆಯಲಿದೆ.