ಗುಜರಾತ್‌ನ ಕಛ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ೮೯ ವಿಧಾನಸಭಾ ಕ್ಷೇತ್ರಗಳಿಗೆ ನಾಡಿದ್ದು ಮೊದಲ ಹಂತದಲ್ಲಿ ಮತದಾನ; ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ

ಗುಜರಾತ್‌ನ ಕಛ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ೮೯ ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಾಡಿದ್ದು ಶನಿವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆಬೀಳಲಿದೆ. ರಾಜಕೀಯ ಪಕ್ಷಗಳ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ಕೊನೆ ಕ್ಷಣದ ಕಸರತ್ತು ನಡೆಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂರತ್‌ನಲ್ಲಿಂದು ರ‍್ಯಾಲಿ ನಡೆಸಲಿದ್ದಾರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕದನ, ಖೇರಲು, ಸಿದ್ಧಾಪುರ್ ಮತ್ತು ದೇಗಂನಗರಳಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತಗಳನ್ನು ಸೆಳೆಯಲು ಹಲವು ಕಡೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

ಮತ್ತೊಂದೆಡೆ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮನಮೋಹನ್ ಸಿಂಗ್ ಅವರು ರಾಜ್‌ಕೋಟ್‌ನಲ್ಲಿ ಹಾಗೂ ಪಕ್ಷದ ನಾಯಕ ಆನಂದ್ ಶರ್ಮ ವಡೋದರಾದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಬಿಜೆಪಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರನ್ನು ಉದ್ದೇಶಿಸಿ ಆಡಿಯೋ ಬ್ರಿಗೇಡ್ ತಂತ್ರಜ್ಞಾನದ ಮೂಲಕ ಮಾತನಾಡುವ ಕಾರ್ಯಕ್ರಮವೂ ನಿಗದಿಯಾಗಿದೆ.