ಜರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿ ಎಂದು ಮಾನ್ಯ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟ; ಹಾಲಿ ತೆಲ್ ಅವೀವ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸ್ಥಳಾಂತರಕ್ಕೆ ಆದೇಶ; ಈ ನಿರ್ಧಾರವನ್ನು ಟ್ರಂಪ್ ಮರುಪರಿಶೀಲಿಸಬೇಕು; ಇದರಿಂದ ಶಾಂತಿ ಪ್ರಕ್ರಿಯೆಗೆ ಅಡಚಣೆಯಾಗಲಿದೆ ಎಂದು ಜಾಗತಿಕ ನಾಯಕರ ಆಗ್ರಹ

ಜರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿ ಎಂದು ಮಾನ್ಯ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಅಲ್ಲದೆ ಹಾಲಿ ತೆಲ್ ಅವೀವ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಜರುಸಲೇಂಗೆ ಸ್ಥಳಾಂತರ ಮಾಡುವ ಯೋಜನೆಯನ್ನು ಘೋಷಿಸಿದ್ದಾರೆ.

ಕಳೆದ ರಾತ್ರಿ ಶ್ವೇತಭವನದಿಂದ ನೇರಪ್ರಸಾರದ ಮೂಲಕ ಮಾತನಾಡಿದ ಟ್ರಂಪ್, ಈ ಕ್ರಮ ಕೈಗೊಳುವುದು ದೀರ್ಘಕಾಲದಿಂದ ಬಾಕಿ ಇತ್ತು ಎಂದು ಹೇಳಿದ್ದಾರೆ. ಅಲ್ಲದೆ, ಜರುಸಲೇಂನಲ್ಲಿ ಅಮೆರಿಕ ರಾಯಭಾರ ಕಚೇರಿಯ ಹೊಸ ಕಟ್ಟಡವನ್ನು ನಿರ್ಮಿಸಲು ಕೂಡಲೇ ಪ್ರಕ್ರಿಯೆ ಆರಂಭಿಸುವಂತೆ ಟ್ರಂಪ್ ವಿದೇಶಾಂಗ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ ಅಮೆರಿಕ ಅಧ್ಯಕ್ಷರು ಇಸ್ರೇಲ್-ಪ್ಯಾಲಿಸ್ತಿನ್ ಬಿಕ್ಕಟ್ಟು ನಿವಾರಣೆಗೆ ಬದ್ಧವಿರುವುದಾಗಿ ಪುನರ್ ಪ್ರತಿಪಾದಿಸಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅಮೆರಿಕಾದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಅವರು ಇದು ಐತಿಹಾಸಿಕ ಮತ್ತು ದಿಟ್ಟ ನಿರ್ಧಾರವಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಜಾಗತಿಕ ನಾಯಕರು ಈ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಟ್ರಂಪ್ ಅವರಿಗೆ ಮನವಿ ಮಾಡಿದ್ದಾರೆ. ಮತ್ತು ಇದರಿಂದ ಆ ಪ್ರಾಂತ್ಯದಲ್ಲಿ ಶಾಂತಿ ಪ್ರಕ್ರಿಯೆಗಳಿಗೆ ತೊಡಕಾಗಲಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷರ ಈ ನಿರ್ಧಾರದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದ್ದು, ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೋ ಗುಟೆರರ್ಸ್ ನೇರ ಸಂಧಾನದ ಮಾತುಕತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಪ್ಯಾಲಿಸ್ತಿನ್ ಅಧ್ಯಕ್ಷ ಮೊಹಮದ್ ಅಬ್ಬಾಸ್, ಅಮೆರಿಕಾದ ಈ ನಿರ್ಧಾರ ಸಮಂಜಸವಲ್ಲ; ಇದರಿಂದ ದಶಕದಿಂದ ನಡೆಯುತ್ತಿರುವ ಇಸ್ರೇಲ್-ಪ್ಯಾಲಿಸ್ತಿನ್ ಶಾಂತಿ ಮಾತುಕತೆ ಪ್ರಕ್ರಿಯೆಗೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ. ಟರ್ಕಿ ವಿದೇಶಾಂಗ ಸಚಿವ ಮೇವಿಯತ್ ಕೌಸೊಗ್ಲೋ, ಅಮೆರಿಕ ಅಧ್ಯಕ್ಷರ ನಿರ್ಧಾರ ಬೇಜವಾಬ್ದಾರಿತನದ್ದು ಎಂದು ಪ್ರತಿಕ್ರಿಯಿಸಿದ್ದಾರೆ. ಸೌದಿ ಅರೇಬಿಯಾದ ದೊರೆ ಸಲ್ಮಾನ್ ಜರುಸಲೇಂಗೆ ರಾಜಧಾನಿ ಸ್ಥಾನಮಾನ ನೀಡುವ ಯಾವುದೇ ಘೋಷಣೆಯನ್ನು ಮಾಡುವ ಮುನ್ನ ಶಾಂತಿ ಸಂಧಾನ ಮಾತುಕತೆ ಅಂತಿಮಗೊಳ್ಳಬೇಕು ಇಲ್ಲವಾದರೆ ಆ ಭಾಗದಲ್ಲಿ ಉದ್ವಿಗ್ನತೆ ಹೆಚ್ಚಾಗಲಿದೆ ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ.

ಈಜಿಪ್ಟ್, ಜೋರ್ಡನ್, ಇರಾನ್ ಮತ್ತು ಕತಾರ್ ಕೂಡ ಅಮೆರಿಕಾದ ಈ ನಡೆಯನ್ನು ಟೀಕಿಸಿವೆ. ಐರೋಪ್ಯ ಒಕ್ಕೂಟ ಎರಡು ದೇಶಗಳ ನಡುವಿನ ಶಾಂತಿ ಪ್ರಕ್ರಿಯೆ ಅರ್ಥಪೂರ್ಣವಾಗಬೇಕಾದರೆ ಜರುಸಲೇಂಗೆ ರಾಜಧಾನಿ ಸ್ಥಾನಮಾನ ನೀಡುವ ಕುರಿತು ವಿಸ್ತೃತವಾಗಿ ಚರ್ಚಿಸಿ ಕೈಗೊಳ್ಳಬೇಕು ಎಂದು ಹೇಳಿದೆ.

ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯಲ್ ಮಾಕ್ರೊನ್, ಟ್ರಂಪ್ ಆಡಳಿತ ಜರುಸಲೇಂಗೆ ಇಸ್ರೇಲ್‌ನ ರಾಜಧಾನಿ ಸ್ಥಾನ ನೀಡಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.  ಬ್ರಿಟನ್ ಪ್ರಧಾನಿ ಥೆರೇಸಾ ಮೇ, ಅಮೆರಿಕಾದ ನಿರ್ಧಾರಕ್ಕೆ ಬ್ರಿಟನ್ ಸರ್ಕಾರದ ಸಂಪೂರ್ಣ ಅಸಹಮತವಿದೆ; ಮತ್ತು ಇದು ಆ ಭಾಗದಲ್ಲಿ ಶಾಂತಿ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

ಚೈನಾ ಮತ್ತು ರಷ್ಯಾ ಕೂಡ ಅಮೆರಿಕಾದ ಈ ನಿರ್ಧಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇದರಿಂದಾಗಿ ಆ ಭಾಗದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಿಳಿಸಿವೆ.