ಠೇವಣಿದಾರರು ಮತ್ತು ಹಣಕಾಸು ಸಂಸ್ಥೆಗಳ ಹಿತವನ್ನು ಸಂಪೂರ್ಣವಾಗಿ ರಕ್ಷಿಸಲು ಸರ್ಕಾರ ಬದ್ಧ – ಹಣಕಾಸು ಸಚಿವ ಅರುಣ್ ಜೈಟ್ಲಿ

ಉದ್ದೇಶಿತ ಹಣಕಾಸು ನಿರ್ಣಯ ಮತ್ತು ಠೇವಣಿ ವಿಮಾ ಮಸೂದೆ ೨೦೧೭ ಮೂಲಕ ಠೇವಣಿದಾರರು ಮತ್ತು ಹಣಕಾಸು ಸಂಸ್ಥೆಗಳ ಹಿತವನ್ನು ಸಂಪೂರ್ಣವಾಗಿ ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೈಟ್ಲಿ ಹೇಳಿದ್ದಾರೆ. ಅವರು ತಮ್ಮ ಟ್ವೀಟ್ ಸಂದೇಶದಲ್ಲಿ, ಮಸೂದೆ ಸಂಸತ್ತಿನ ಸ್ಥಾಯಿ ಸಮಿತಿ ಮುಂದೆ ಬಾಕಿ ಇದೆ ಮತ್ತು ಆ ಮಸೂದೆಯ ಆಶಯಗಳಿಗೆ ಸರ್ಕಾರ ಬದ್ಧವಿದೆ ಎಂದು ತಿಳಿಸಿದ್ದಾರೆ.

ಬ್ಯಾಂಕ್ ಠೇವಣಿಗಳ ಕುರಿತಾದ ಆತಂಕದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಹಣಕಾಸು ವ್ಯವಹಾರಗಳ ಕಾರ‍್ಯದರ್ಶಿ ಎಸ್.ಸಿ. ಗರ್ಗ್ ತಮ್ಮ ಟ್ವೀಟ್‌ನಲ್ಲಿ, ಉದ್ದೇಶಿತ ಮಸೂದೆಯಲ್ಲಿ ಠೇವಣಿದಾರರ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಈಗಿರುವ ಕಾನೂನು ಅಂಶಗಳನ್ನು ಇನ್ನಷ್ಟು ಬಲಗೊಳಿಸಲಿದೆ ಮತ್ತು ಅದರಲ್ಲಿ ಯಾವುದೇ ದುರ್ಬಲ ಅಂಶಗಳಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಸಾರ್ವಜನಿಕ ವಲಯದ ಬ್ಯಾಂಕ್ ಠೇವಣಿದಾರರ ಮೂಲ ಖಾತ್ರಿ ಕೇಂದ್ರ ಸರ್ಕಾರದ ಮಾಲೀಕತ್ವದ್ದಾಗಿರುತ್ತದೆ, ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.