ನೀತಿ ಆಯೋಗದಡಿ ಇಂದು ದೇಶದ ಹಲವು ವಲಯಗಳ ತಜ್ಞರು ಹಾಗೂ ಪ್ರಮುಖ ಆರ್ಥಿಕ ಪಂಡಿತರ ಜತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮಾಲೋಚನೆ

ದೇಶದಲ್ಲೆಡೆಯ ವಿವಿಧ ಕ್ಷೇತ್ರಗಳ ಮುಂಚೂಣಿ ಆರ್ಥಿಕ ತಜ್ಞರು ಹಾಗೂ ಪರಿಣಿತರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀತಿ ಆಯೋಗದಲ್ಲಿಂದು  ಸಂವಾದ ನಡೆಸಲಿದ್ದಾರೆ.

ಆರ್ಥಿಕ ನೀತಿ-ಮುಂದಿನ ಹಾದಿ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ. ನವಭಾರತದತ್ತ ದೇಶವನ್ನು ಕೊಂಡೊಯ್ಯುವ ಮಾರ್ಗೋಪಾಯಗಳ ಬಗ್ಗೆ ತಜ್ಞರೊಂದಿಗೆ ಪ್ರಧಾನ ಮಂತ್ರಿ ವಿಚಾರ ವಿನಿಮಯ ನಡೆಸುವರು.

ಆರ್ಥಿಕತೆ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಸಂಪರ್ಕ, ಉದ್ಯೋಗ, ತಯಾರಿಕಾ ಮತ್ತು ರಫ್ತು ಹಾಗೂ ಆರೋಗ್ಯ ಮತ್ತು ಶಿಕ್ಷಣ ಈ ಕ್ಷೇತ್ರಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯಲಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೃಷಿ ಸಚಿವ ರಾಧಾಮೋಹನ್‌ಸಿಂಗ್, ಯೋಜನಾ ಖಾತೆ ಸಹಾಯಕ ಸಚಿವ ರಾವ್ ಇಂದ್ರಜಿತ್ ಸಿಂಗ್ ಹಾಗೂ ನೀತಿ ಆಯೋಗದ ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಇಓ ಅಲ್ಲದೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವರು.