ರೈತರ ಆದಾಯ ದುಪ್ಪಟ್ಟುಗೊಳಿಸುವ ಮಾರ್ಗೋಪಾಯಗಳ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಖ್ಯಾತ ಅರ್ಥಶಾಸ್ತ್ರಜ್ಞರು ಹಾಗೂ ತಜ್ಞರ ಜೊತೆ ಸಮಾಲೋಚನೆ.

ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಮಾರ್ಗೋಪಾಯಗಳ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಖ್ಯಾತ ಅರ್ಥಶಾಸ್ತ್ರಜ್ಞರು ಹಾಗೂ ತಜ್ಞರ ಜೊತೆ ಸಮಾಲೋಚನೆ ನಡೆಸಿದರು. ನವದೆಹಲಿಯಲ್ಲಿ ನಿನ್ನೆ ನೀತಿ ಆಯೋಗದಲ್ಲಿ ನಡೆದ ಸಭೆಯಲ್ಲಿ ೪೦ ಅರ್ಥಶಾಸ್ತ್ರಜ್ಞರು ಹಾಗೂ ತಜ್ಞರು ಭಾಗವಹಿಸಿದ್ದರು. ಈ ಸಮಾಲೋಚನ ಕಾರ್ಯಕ್ರಮದ ವಿಷಯ ಆರ್ಥಿಕ ನೀತಿ- ಮುಂದಿನ ಹಾದಿ” ಎಂಬುದಾಗಿತ್ತು. ಸಮಾಲೋಚನಾ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ತಜ್ಞರು ಹಾಗೂ ಚಿಂತಕರು ಕಿರು ಹಣಕಾಸು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಉದ್ಯೋಗಸೃಷ್ಟಿ, ಆರೋಗ್ಯ ಮತ್ತು ಶಿಕ್ಷಣ, ಉತ್ಪಾದನಾ ವಲಯ, ರಫ್ತು, ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಸಂಪರ್ಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಎಂದರು.
ತಜ್ಞರು ರೈತರ ಆದಾಯ ಹೆಚ್ಚಳಕ್ಕೆ ಕೃಷಿ ಉತ್ಪಾದನೆ ಹೆಚ್ಚಳಕ್ಕಿಂತ, ಇಳುವರಿ ಅಧಿಕಗೊಳಿಸುವುದು , ಉತ್ಪಾದನಾ ವೆಚ್ಚ ತಗ್ಗಿಸುವುದು ಮತ್ತು ಮಾರುಕಟ್ಟೆ ಸೌಕರ್ಯ ಒದಗಿಸಿಕೊಡುವುದಕ್ಕೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆಂದರು. ಸಂವಾದದಲ್ಲಿ ಪ್ರಧಾನಿ ಅವರು ಆರ್ಥಿಕತೆಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಸಲಹೆ ನೀಡಿದ ತಜ್ಞರಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ಕೇಂದ್ರ ಸಚಿವರಾದ ಅರುಣ್ ಜೈಟ್ಲಿ, ರಾಧಾ ಮೋಹನ್ ಸಿಂಗ್ ಮತ್ತು ಆರ್.ಕೆ.ಸಿಂಗ್ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.