ಕಾರ್ಟೋಸ್ಯಾಟ್-೨ ಸರಣಿಯ ಉಪಗ್ರಹ ಸೇರಿದಂತೆ ಒಟ್ಟು ೩೦ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಇಂದು ಬೆಳಿಗ್ಗೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೊ ಸಜ್ಜು

ಕಾರ್ಟೋಸ್ಯಾಟ್-೨ ಸರಣಿಯ ಉಪಗ್ರಹ ಸೇರಿದಂತೆ ಒಟ್ಟು ೩೦ ಉಪಗ್ರಹಗಳನ್ನು ಪಿಎಸ್‌ಎಲ್ ವಿ ರಾಕೆಟ್ ಮೂಲಕ ಇಂದು ಬೆಳಿಗ್ಗೆ ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೊ ಸಜ್ಜಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ ೯ ಗಂಟೆ ೨೯ ನಿಮಿಷಕ್ಕೆ ಉಡಾವಣೆ ಮಾಡಲು ಸಕಲ ಸಿದ್ಧತೆ ನಡೆದಿದೆ.  

ಇಸ್ರೋದ, ಪಿಎಸ್‌ಎಲ್‌ವಿ-ಸಿ೪೦ ರಾಕೆಟ್ ಮೂಲಕ ಕಾರ್ಟೋಸ್ಯಾಟ್-೨ ಸರಣಿಯ ಉಪಗ್ರಹದೊಂದಿಗೆ ಉಡಾವಣೆಗೆ ಸಿದ್ಧಗೊಂಡಿರುವ ಇತರ ೨೯ ಉಪಗ್ರಹಗಳು ಕೆನಡಾ, ಫಿನ್‌ಲ್ಯಾಂಡ್, ಫ್ರಾನ್ಸ್, ದಕ್ಷಿಣ ಕೊರಿಯಾ, ಬ್ರಿಟನ್ ಮತ್ತು ಅಮೆರಿಕ ದೇಶಗಳದ್ದಾಗಿವೆ. ಇದರೊಂದಿಗೆ ಇಸ್ರೋ ಸಂಸ್ಥೆಯ ಎರಡು ಉಪಗ್ರಹಗಳು ಸೇರಿವೆ.

ಇಸ್ರೋ ಅಧ್ಯಕ್ಷ ಸ್ಥಾನದಿಂದ ನಿವೃತ್ತರಾಗುತ್ತಿರುವ ಡಾ. ಎ.ಎಸ್. ಕಿರಣ್‌ಕುಮಾರ್ ನೇತೃತ್ವದಲ್ಲಿ ರಾಕೆಟ್ ಉಡಾವಣಾ ಕಾರ್ಯ ನಡೆಯಲಿದ್ದು, ಕಾರ್ಟೋಸ್ಯಾಟ್-೨ ಸರಣಿ ಉಪಗ್ರಹ ಇಸ್ರೋದ ನೂರನೇ ಉಪಗ್ರಹವಾಗಿದೆ.

ಪಿಎಸ್‌ಎಲ್‌ವಿ-ಸಿ೪೦ ರಾಕೆಟ್ ೩೨೦ ಟನ್‌ಗಳದ್ದಾಗಿದ್ದು, ಉಪಗ್ರಹಗಳ ಒಟ್ಟು ತೂಕ ೧ ಸಾವಿರದ ೩೨೩ ಕಿಲೋಗ್ರಾಂಗಳಾಗಿದೆ. ಭೂಮಿಯಿಂದ ೫೦೫ ಕಿಲೋಮೀಟರ್ ದೂರದ ಕಕ್ಷೆಗೆ ಉಪಗ್ರಹಗಳನ್ನು ಸೇರಿಸಲಾಗುತ್ತದೆ. ಉಡಾವಣೆಯ ಕ್ಷಣಗಣನೆ ಸಂದರ್ಭದಲ್ಲಿ ಪಿಎಸ್‌ಎಲ್‌ವಿ-ಸಿ೪೦ ರಾಕೆಟ್‌ಗೆ ಎರಡು ಹಂತದಲ್ಲಿ ದ್ರವ ಇಂಧನ ತುಂಬುವುದು ಹಾಗೂ ಉಡಾವಣೆ ವೇಳೆ ಬಹು-ಎಂಜಿನ್ ಕಾರ್ಯ ನಿರ್ವಹಣೆ ಪ್ರಮುಖ ಘಟ್ಟವಾಗಿದೆ. ಸುಮಾರು ೨ ಗಂಟೆ ೨೨ ನಿಮಿಷ ಅವಧಿ  ಈ ಉಡಾವಣೆ ಉಪಗ್ರಹ ಉಡಾವಣೆ ಅವಧಿಯ ಪೈಕಿ ಸುದೀರ್ಘದ್ದಾಗಿದೆ.

ರಾಕೆಟ್ ಉಡಾವಣೆಯ ಕ್ಷಣಗಣನೆ ಸಂದರ್ಭದ ಇನ್ನೊಂದು ಮಹತ್ವದ ಕಾರ್ಯವೆಂದರೆ ಉಡಾವಣಾ ವ್ಯವಸ್ಥೆಯನ್ನು ದೂರ ನಿಯಂತ್ರಣ ಸಾಧನಾ ಹಾಗೂ ಸಿಬ್ಬಂದಿಯಿಂದ ಪರಿಶೀಲನೆ ಹಾಗೂ ಪುನರ್ ಪರಿಶೀಲನೆ ನಡೆಸುವುದಾಗಿದೆ.

ಕಾರ್ಟೋಸ್ಯಾಟ್ ಸರಣಿಯ ೭ನೇ ರಿಮೋಟ್ ಸೆನ್ಸಿಂಗ್ ಉಪಗ್ರಹ ಇದಾಗಿದ್ದು ಸುಮಾರು ೫ ವರ್ಷ ಕಾರ್ಯ ನಿರ್ವಹಿಸಲಿದೆ. ನಗರ ಮತ್ತು ಗ್ರಾಮೀಣ ರಸ್ತೆ ಸಂಪರ್ಕ ಜಾಲ, ನೀರು ಪೂರೈಕೆ, ಭೌಗೋಳಿಕ ಬದಲಾವಣೆ ಗುರುತಿಸುವಿಕೆ ಮುಂತಾದ ವಲಯಗಳಲ್ಲಿ ಈ ಉಪಗ್ರಹ ನೆರವಾಗಲಿದೆ.