ದೇಶದಲ್ಲಿ ನಕ್ಸಲ್ ಹಿಂಸಾಚಾರ ಪ್ರಕರಣ ಮತ್ತು ನಕ್ಸಲರಿಂದ ಉಂಟಾಗುವ ಹತ್ಯೆಗಳ ಪ್ರಮಾಣ ೨೦೧೦ರಿಂದ ಗಣನೀಯ ಇಳಿಕೆ – ನೀತಿ ಆಯೋಗಕ್ಕೆ ಕೇಂದ್ರ ಗೃಹ ಸಚಿವಾಲಯ ವರದಿ.

ದೇಶದಲ್ಲಿ ನಕ್ಸಲ್ ಹಿಂಸಾಚಾರ ಪ್ರಕರಣಗಳು ಮತ್ತು  ನಕ್ಸಲರಿಂದ ಉಂಟಾಗುವ ಹತ್ಯೆಗಳ ಪ್ರಮಾಣ ೨೦೧೦ರಿಂದ ಗಣನೀಯವಾಗಿ ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ನೀತಿ ಆಯೋಗಕ್ಕೆ  ನೀಡಿದ ವರದಿಯಲ್ಲಿ ತಿಳಿಸಿದೆ.

೨೦೧೦ರಲ್ಲಿ ಎರಡು ಸಾವಿರದ ೨೧೩ ನಕ್ಸಲ್ ಹಿಂಸಾಚಾರ ಪ್ರಕರಣಗಳು ಮತ್ತು ಒಂದು ಸಾವಿರದ ಐದು ಹತ್ಯೆಗಳು ನಡೆದಿದ್ದವು. ೨೦೧೭ರಲ್ಲಿ ಈ ಪ್ರಮಾಣ ಕ್ರಮವಾಗಿ ೮೫೧ ಮತ್ತು ೨೨೫ಕ್ಕೆ  ಇಳಿದಿದೆ ಎಂದು ವರದಿ ತಿಳಿಸಿದೆ.

ದೇಶದ ೧೦ ರಾಜ್ಯಗಳಲ್ಲಿ ಒಟ್ಟು ೧೦೬ ಜಿಲ್ಲೆಗಳು ಎಡಪಂಥೀಯ  ತೀವ್ರವಾದದಿಂದ ಪೀಡಿತವಾಗಿವೆ. ಈ ಪೈಕಿ  ೩೫ ಜಿಲ್ಲೆಗಳು ಅತಿ ಸೂಕ್ಷ್ಮವಾಗಿವೆ. ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್  ಮತ್ತು ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳು ಹೆಚ್ಚಾಗಿವೆ.  

ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಯೋಜನೆಗಳು, ಮೊಬೈಲ್ ದೂರವಾಣಿ ಸೇವೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ವಿವಿಧ ಸಚಿವಾಲಯಗಳ ಮೂಲಕ ಕೈಗೊಳ್ಳಲಾಗುತ್ತಿದೆ ಎಂದು ವರದಿ ತಿಳಿಸಿದೆ.