ನೋಯ್ಡಾದಲ್ಲಿಂದು ರಾಷ್ಟ್ರೀಯ ಯುವಜನ ಉತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ

ದೆಹಲಿ ಸಮೀಪದ  ನೋಯ್ಡಾದಲ್ಲಿಂದು ರಾಷ್ಟ್ರೀಯ ಯುವಜನ ಉತ್ಸವಕ್ಕೆ ಪ್ರಧಾನಿ ನರೇಂದ್ರ  ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ  ಚಾಲನೆ ನೀಡಲಿದ್ದಾರೆ.

ಐದು ದಿನಗಳ ಈ ಉತ್ಸವ  ಯುವಜನರ ಪ್ರತಿಭಾ ಪ್ರದರ್ಶನಕ್ಕೆ  ಉತ್ತಮ ವೇದಿಕೆಯಾಗಿದೆ. ಸಂಕಲ್ಪದಿಂದ ಸಿದ್ಧಿ ಎಂಬ ಘೋಷವಾಕ್ಯ ಹೊಂದಿರುವ ಈ ಉತ್ಸವ  ನವಭಾರತ ನಿರ್ಮಾಣದ ಗುರಿ ಸಾಧನೆಯಲ್ಲಿ ಯುವಜನರನ್ನು ಒಳಗೊಳಿಸುವುದಾಗಿದೆ.

ಸ್ವಾಮಿ ವಿವೇಕಾನಂದ ಜನ್ಮದಿನದಂದು ಈ ಉತ್ಸವ ಆರಂಭಗೊಳ್ಳುತ್ತಿದ್ದು, ಭಾರತದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಯುವಜನರು ಸಾಮಾಜಿಕ ಮತ್ತು ಸಾಂಸ್ಕೃತಿಕ ಏಕತೆ ಪ್ರದರ್ಶಿಸಲಿದ್ದಾರೆ.  

ಸರ್ಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವರ ಸಲಹೆ ಮತ್ತು ಸೂಚನೆ ಪಡೆಯುವುದು  ಉತ್ಸವದ ಉದ್ದೇಶವಾಗಿದೆ.

ದೇಶದ  ವಿವಿಧ ಭಾಗಗಳಿಂದ ನೆಹರೂ ಯುವ ಕೇಂದ್ರ ಮತ್ತು  ರಾಷ್ಟ್ರೀಯ ಸೇವಾ ಯೋಜನೆ -ಎನ್‌ಎಸ್‌ಎಸ್ ಅಡಿ  ೫ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಅಲ್ಲದೇ ರಾಷ್ಟ್ರೀಯ ಯುವ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಗುತ್ತಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಂಸ್ಕೃತಿ ಸಚಿವ ಡಾ. ಮಹೇಶ್ ಶರ್ಮ ಮತ್ತು  ಕೇಂದ್ರ ಯುವಜನ ಸೇವಾ  ಸಚಿವ ಕರ್ನಲ್ ರಾಜ್ಯವರ್ಧನ  ರಾಥೋಡ್ ಸಹ ಭಾಗವಹಿಸಲಿದ್ದಾರೆ.