ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿರುವ ನಂತರದ ವಿವಾದದಲ್ಲಿ ಕಾಂಗ್ರೆಸ್ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ – ಬಿಜೆಪಿ ಆರೋಪ.

ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿರುವ  ನಂತರದ ವಿವಾದದಲ್ಲಿ ಕಾಂಗ್ರೆಸ್ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್ ಮಾಡಿರುವ ಆರೋಪಗಳ ಕುರಿತಂತೆ ಪ್ರತಿಕ್ರಿಯಿಸಿರುವ ಭಾರತೀಯ ಜನತಾ ಪಕ್ಷದ ವಕ್ತಾರ ಸಂಬಿತ್ ಪಾತ್ರ ಇದು ಸುಪ್ರೀಂಕೋರ್ಟ್‌ನ ಆಂತರಿಕ ವಿಚಾರ ಮತ್ತು ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದರು.

ನ್ಯಾಯಮೂರ್ತಿಗಳ ವ್ಯಕ್ತಪಡಿಸಿರುವ ಅಭಿಪ್ರಾಯಗಳು ತುಂಬಾ ಆತಂಕಕಾರಿಯಾಗಿವೆ ಮತ್ತು ಅವು ನ್ಯಾಯಾಂಗದ ಸಾರ್ವಭೌಮತೆಯನ್ನು ರಕ್ಷಿಸಲು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಪಕ್ಷದ ವಕ್ತಾರ ರಂದೀಪ್ ಸುರ್ಜೆವಾಲಾ ನಾಲ್ವರು ನ್ಯಾಯಮೂರ್ತಿಗಳು ಪ್ರಸ್ತಾಪಿಸಿರುವ ವಿಷಯವನ್ನು ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಾಮೂರ್ತಿಗಳನ್ನೊಳಗೊಂಡ ಪೂರ್ಣ ಪೀಠದಲ್ಲಿ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ಸುಪ್ರೀಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್, ರಂಜನ್ ಗೊಗೋಯ್, ಮದನ್ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರುಗಳು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸುಪ್ರೀಂಕೋರ್ಟ್‌ಗಳ ಆಡಳಿತ ವೈಖರಿಯನ್ನು ಪ್ರಶ್ನಿಸಿದ್ದಾರೆ.

ಇತ್ತೀಚಿನ ಕೆಲವು ತಿಂಗಳುಗಳಿಂದೀಚೆಗೆ ಸುಪ್ರೀಂಕೋರ್ಟ್ ಆಡಳಿತದಲ್ಲಿ ಕೆಲವೊಂದು ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರವನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳ ವಿಚಾರಣೆಗೆ ನಿಯೋಜಿಸುವಾಗ ಆಯ್ದ ಪೀಠಗಳಿಗೆ ಮಾತ್ರ ಕೆಲವು ಪ್ರಕರಣಗಳನ್ನು ನೀಡಲಾಗುತ್ತಿದೆ ಎಂದು ದೂರಿದ್ದಾರೆ.

ಈ ಮಧ್ಯೆ, ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಸುದ್ದಿಗೋಷ್ಠಿಯನ್ನು ನಡೆಸಬಾರದಿತ್ತು ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೆಲ್ಲಾ ಪಂಡಿತರಾಗಿದ್ದು, ಅವರಿಗೆ ಅಪಾರ ಜ್ಞಾನ ಮತ್ತು ಅನುಭವ ಹೊಂದಿದ್ದಾರೆ. ಇಡೀ ಪ್ರಕರಣ ಆದಷ್ಟು ಬೇಗ ಇತ್ಯರ್ಥವಾಗಲಿದೆ ಎಂದು ಅವರು ಹೇಳಿದ್ದಾರೆ.