ಸಿಂಗಲ್ ಬ್ರಾಂಡ್ ರಿಟೇಲ್ ನಲ್ಲಿ ಎಫ್ಡಿಐಗೆ ಕ್ರಮ

ಆರ್ಥಿಕ ಬೆಳವಣಿಗೆ, ಹೂಡಿಕೆ ಮತ್ತು ಉದ್ಯೋಗವನ್ನು ಪ್ರಚೋದಿಸಲು ಎಫ್ಡಿಐ ಒಳಹರಿವನ್ನು ಆಕರ್ಷಿಸುವ ಉದ್ದೇಶದಿಂದ ಭಾರತದಲ್ಲಿ ವಾಯುಯಾನ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಯ (ಎಫ್ಡಿಐ) ನಿಯಮಾವಳಿಗಳನ್ನು ಕೇಂದ್ರ ಸರ್ಕಾರವು ಸರಳೀಕೃತಗೊಳಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸರ್ಕಾರವು “ಸಿಂಗಲ್ ಬ್ರ್ಯಾಂಡ್” ಚಿಲ್ಲರೆ ವಹಿವಾಟು ಮತ್ತು ನಾಗರಿಕ ವಾಯುಯಾನದಲ್ಲಿ ಎಫ್ಡಿಐ ಅನ್ನು ತರಲುದ್ದೇಶಿಸಿದೆ. ನಾಗರಿಕ ವಿಮಾನಯಾನದಲ್ಲಿನ ಎಫ್ಡಿಐ ವಿಶೇಷವಾಗಿ ಏರ್ ಇಂಡಿಯಾ ಷೇರು ಹೂಡಿಕೆಗೆ ಅನುಕೂಲವಾಗುವಂತೆ ಕೇಂದ್ರೀಕರಿಸಲಾಗಿದೆ.
2016-17ರಲ್ಲಿ ಭಾರತವು ಸುಮಾರು 60 ಶತಕೋಟಿ ಡಾಲರ್ನಷ್ಟು ವಿದೇಶಿ ನೇರ ಹೂಡಿಕೆಯನ್ನು ಕಂಡಿದೆಯಾದರೂ, ಸರ್ಕಾರವು ಎಫ್ಡಿಐಯನ್ನು ಮತ್ತಷ್ಟು ಉದಾರೀಕರಣಗೊಳಿಸುವ ಅಗತ್ಯವನ್ನು ಕಂಡುಕೊಂಡಿದೆ. ಭಾರತದಲ್ಲಿ ಉದ್ಯಮ ವಹಿವಾಟು ಹೆಚ್ಚಿಸಬೇಕೆಂಬ ಉದ್ದೇಶದಿಂದ ಕೇಂದ್ರ ಈ ಚಿಂತನೆ ನಡೆಸಿದೆ.  
“ಸ್ವಯಂಚಾಲಿತ ಮಾರ್ಗ” ಅಡಿಯಲ್ಲಿ  ಶೇ.49 ಎಫ್ಡಿಐ ಸೇರಿದಂತೆ ಚಿಲ್ಲರೆ ವ್ಯಾಪಾರದಲ್ಲಿ 100 ಶೇ. ಎಫ್ಡಿಐಗೆ ಅನುಮತಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದು ಚಿಲ್ಲರೆ ವ್ಯಾಪಾರದ (ಏಕ ಬ್ರ್ಯಾಂಡ್) ಎಫ್ಡಿಐಗಾಗಿ ಕ್ಲಿಯರೆನ್ಸ್ ಪ್ರಕ್ರಿಯೆಯ ವೇಗ ಹೆಚ್ಚಿಸಲಿದೆ. ತಮ್ಮ ಅಂತರಾಷ್ಟ್ರೀಯ ವ್ಯವಹಾರಗಳಿಗೆ ಸರಕುಗಳನ್ನು ಸಜ್ಜುಗೊಳಿಸಲು ಈ ಅನುಮೋದನೆ ಪ್ರಮುಖವಾದದ್ದು. ಶೇ.100ರಷ್ಟು ಸಿಂಗಲ್ ಬ್ರ್ಯಾಂಡ್ ರಿಟೇಲ್ ಟ್ರೇಡಿಂಗ್ ನಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಮಾಡಿಕೊಡುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಚಿಲ್ಲರೆ ವ್ಯಾಪಾರದಲ್ಲಿ ಪ್ರವೇಶಿಸಲು ಸಾಧ್ಯವಾಗಲಿದೆ.  
ನಾಗರಿಕ ವಿಮಾನಯಾನದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದಾಗಿ ವಿದೇಶಿ ವಿಮಾನಯಾನ ಸಂಸ್ಥೆಗಳು ಶೇ.49ರಷ್ಟು ಹೂಡಿಕೆಯನ್ನು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದಲ್ಲಿ ನಡೆಸಬಹುದಾಗಿದೆ. ಏರ್ ಇಂಡಿಯಾದಲ್ಲಿ ವಿದೇಶಿ ವಿಮಾನ ಸಂಸ್ಥೆಗಳ ಹೂಡಿಕೆ ಶೇ.49ನ್ನುಮೀರುವಂತಿಲ್ಲ. ಏಕೆಂದರೆ ಏರ್ ಇಂಡಿಯಾದಲ್ಲಿನ ಹೆಚ್ಚಿನ ಪಾಲು ಷೇರು ಭಾರತದ್ದೇ ಆಗಿರಬೇಕು. ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತದ ಬಗ್ಗೆ ಚರ್ಚೆಗಳು ನಡೆದಿದ್ದರೂ, ಏರ್ ಇಂಡಿಯಾದಲ್ಲಿ ವಿದೇಶಿ ಸಂಸ್ಥೆಗಳು ಹೂಡಿಕೆ ಮಾಡುವ ವಿಚಾರ ವಿಮಾನಯಾನದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ವಿಚಾರದಲ್ಲಿ ಮಹತ್ವದ ಬೆಳವಣಿಗೆ ಎಂಬುದು ಗಮನಾರ್ಹ.  
ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಶೇ.83ರಷ್ಟು ಷೇರನ್ನು ಹೊಂದಿರುವ ಮತ್ತು 260 ವಿಮಾನಯಾನ ಸಂಸ್ಥೆಗಳನ್ನು ಪ್ರತಿನಿಧಿಸುತ್ತಿರುವ ದ ಇಂಟರ್ ನ್ಯಾಷನಲ್ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್, ಭಾರತದ ಸ್ಥಳೀಯ ವಿಮಾನಯಾನ ಕ್ಷೇತ್ರದಲ್ಲಿ ಎರಡಂಕಿ ಪ್ರಗತಿಗೆ (ಸುಮಾರು 20) ಮೆಚ್ಚುಗೆ ವ್ಯಕ್ತಪಡಿಸಿದೆ. ಭಾರತದಲ್ಲಿ ಹೊಸ ವಿಮಾನಯಾನ ಸೇವೆಗಳು ಹೆಚ್ಚಾಗಿದ್ದರಿಂದ ಈ ಪ್ರಮಾಣದ ಪ್ರಗತಿಯಾಗಿದೆ. 
ಸಂಪರ್ಕವಿಲ್ಲದ ನಗರಗಳಿಗೆ ಪ್ರಾದೇಶಿಕ ವಿಮಾನಯಾನ ಸಂಪರ್ಕ ಮಾಡುವ ಬಗ್ಗೆ ಕೇಂದ್ರ ವಿಮಾನಯಾನ ಸಚಿವರು ಘೋಷಣೆ ಮಾಡಿದ್ದಾರೆ. ವಿಮಾನಯಾನದಲ್ಲಿ ಎಫ್ಡಿಐ ಎಂದರೆ ಕೇವಲ ವಿಮಾನಯಾನ ಕ್ಷೇತ್ರಕ್ಕೆ ಮಾತ್ರ ಇದು ಮೀಸಲು ಎಂದಲ್ಲ. ವಿಮಾನಯಾನ ಮೂಲಸೌಕರ್ಯ ಹಾಗೂ ವಿಮಾನಯಾನ ಆರ್ಥಿಕತೆ ಸುಧಾರಣೆಗೂ ಎಫ್ಡಿಐ ಬಳಸಿಕೊಳ್ಳಲಾಗುವುದು. 
ವಿಮಾನಯಾನ ಸಂಸ್ಥೆಗಳಲ್ಲಿ ಎಫ್ಡಿಐ ಬರುವುದರಿಂದ ಈ ಕ್ಷೇತ್ರ ಇನ್ನೂ ಬಲಗೊಳ್ಳಲಿದೆ. ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಗಳ ಅಭಿವೃದ್ಧಿಯ (ಹೈದರಾಬಾದ್ ಮತ್ತು ಬೆಂಗಳೂರು) ಮತ್ತು ಬ್ರೌನ್ ಫೀಲ್ಡ್ ವಿಮಾನ ನಿಲ್ದಾಣಗಳು (ದೆಹಲಿ ಮತ್ತು ಮುಂಬೈಗಳಂತಹವು) ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ರೂಪಿಸಿಕೊಂಡಿದೆ. ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗಳಲ್ಲಿ 100% ಎಫ್ಡಿಐ ಮತ್ತು ಬ್ರೌನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಗೆ ಶೇ.74ರಷ್ಟು ಎಫ್ಡಿಐ ನೀತಿಯನ್ನು ಕೇಂದ್ರ ಘೋಷಿಸಿದೆ.  
ಸಾಲದ ಹಾದಿ ಹಿಡಿದಿರುವ ಏರ್ ಇಂಡಿಯಾದಲ್ಲಿ ಬಿಡ್ ಮಾಡಲು ಜಾಗತಿಕ ವಿಮಾನಯಾನ ಸಂಸ್ಥೆಗಳಿಗೆ ಬಿಡ್ ಸರ್ಕಾರ ಒಪ್ಪಿದೆ.  ಇತರೆ ಸ್ಥಳೀಯ ವಿಮಾನಯಾನ ಸಂಸ್ಥೆಗಳಲ್ಲಿ 100% ವಿದೇಶಿ ಹೂಡಿಕೆಯನ್ನು ಭಾರತವು ಅನುಮತಿಸಿದ್ದರೂ, ಏರ್ ಇಂಡಿಯಾಕ್ಕೆ ಇದು 49% ರಷ್ಟು ಎಫ್ಡಿಐ ಕ್ಯಾಪ್ ಅನ್ನು ನಿಗದಿಪಡಿಸಲಾಗಿದೆ. 
ಎಫ್ಡಿಐ ಮೇಲಿನ ಇತ್ತೀಚಿನ ಕ್ರಮಗಳು ಮೋದಿ ಸರ್ಕಾರ ವಿದೇಶಿ ನೇರ ಹೂಡಿಕೆಗೆ ಆದ್ಯತೆ ನೀಡುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಎಫ್ಐಐದಿಂದ ಎಫ್ಡಿಐಗೆ ವಿದೇಶಿ ಹೂಡಿಕೆಯ ಸಂಯೋಜನೆಯ ಬದಲಾವಣೆಯು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ನಿರ್ಮಾಣಕ್ಕೆ ಅನುಕೂಲಕರ. ತುಲನಾತ್ಮಕವಾಗಿ ನೋಡಿದರೆ ಎಫ್ಡಿಐ ಸ್ಥಿರ ಹೂಡಿಕೆಯಾಗಿದೆ. ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ನಾವು ನಿರೀಕ್ಷಿಸಬಹುದಾಗಿದೆ. 
ಲೇಖನ : ಡಾ. ಲೇಖಾ ಎಸ್. ಚಕ್ರವರ್ತಿ, ಅಸೋಸಿಯೇಟ್ ಪ್ರೊಫೆಸರ್, ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ ಮತ್ತು ರಿಸರ್ಚ್ ಅಸೋಸಿಯೇಟ್, ದ ಲೆವಿ ಎಕಾನಮಿಕ್ಸ್ ಇನ್ ಸ್ಟಿಟ್ಯೂಟ್ ಆಫ್ ಬಾರ್ಡ್ ಕಾಲೇಜ್, ನ್ಯೂಯಾರ್ಕ್