ಪ್ರಧಾನಿಯವರ ಯಶಸ್ವೀ ಗಲ್ಫ್ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಧ್ಯಪ್ರಾಚ್ಯದ ಜತೆ ಭಾರತದ ಸಂಬಂಧದಲ್ಲಿ ಭಾರೀ ಸ್ವಾಗತಾರ್ಹ ಬದಲಾವಣೆಗಳಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಮಧ್ಯಪ್ರಾಚ್ಯದ ಜತೆಗಿನ ಬಾಂಧವ್ಯ ವ್ಯೂಹಾತ್ಮಕ ಹಂತಕ್ಕೆ ಸಾಗಿದೆ. ಮೋದಿ ಅವರ ಪ್ಯಾಲೆಸ್ತೇನ್, ಯುಎಇ ಮತ್ತು ಓಮನ್ ದೇಶಗಳಿಗೆ ಭೇಟಿ ನೀಡಿರುವುದು ವಿಶ್ವದ ಪ್ರಮುಖ ಪ್ರದೇಶಗಳೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿದೆ. ಪ್ಯಾಲೆಸ್ತೇನ್ ಗೆ ಯಶಸ್ವೀ ಭೇಟಿ ನೀಡಿದ ಪ್ರಧಾನಿಯವರು, ಅಬುಧಾಬಿ ಮತ್ತು ದುಬೈಗೂ ಪ್ರವಾಸ ಕೈಗೊಂಡರು. ದುಬೈನಲ್ಲಿ ಪ್ರಧಾನಿ ಅವರು 6ನೇ ವಿಶ್ವ ಸರ್ಕಾರಿ ಸಭೆಯಲ್ಲಿ ಗೆಸ್ಟ್ ಆಫ್ ಹಾನರ್ ಆಗಿದ್ದರು. ತಂತ್ರಜ್ಞಾನ ಮತ್ತು ಅಭಿವೃದ್ಧಿ ಬಗ್ಗೆ ಅವರು ಇದೇ ವೇಳೆ ಭಾಷಣವನ್ನೂ ಮಾಡಿದರು. 
ಯುಎಇ ಅಧ್ಯಕ್ಷ ಮತ್ತು ಅಬುಧಾಬಿ ನಾಯಕ ಶೇಕ್ ಖಲೀಫಾ ಬಿನ್ ಜಾಯೆದ್ ಮತ್ತು ಅಲ್ಲಿನ ರಾಜ ಶೇಕ್ ಮಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಯುಎಇಯ ಎಮಿರ್ ಮಹಮ್ಮದ್ ಬಿನ್ ರಶೀದ್ ಅವರನ್ನೂ ಅವರು ಭೇಟಿ ಮಾಡಿದರು.
ಎರಡೂ ಬದಿಯ ನಿಯೋಗಗಳ ನಡುವೆಯೂ ಮಾತುಕತೆ ನಡೆಯಿತು. ಯುಎಇ ಜತೆಗೆ ಇಂಧನ ಸಂಬಂಧದ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಯಿತು. ಯುಎಇ ಮತ್ತು ಭಾರತ ಮಧ್ಯೆ ಮಾನವ ಸಂಪನ್ಮೂಲದ ಕುರಿತೂ ಸಹಿ ಹಾಕಲಾಯಿತು. ಯುಎಇಯಲ್ಲಿ ಸುಮಾರು 3.3 ಮಿಲಿಯನ್ ಭಾರತೀಯ ಕಾರ್ಮಿಕರಿದ್ದಾರೆ. ಭಾರತದ ರೈಲ್ವೆ ಇಲಾಖೆ ಮತ್ತು ಯುಎಇಯ ರಸ್ತೆ ಮತ್ತು ಸಾರಿಗೆ ಇಲಾಖೆ ಮಧ್ಯೆ ರೈಲ್ವೆ ಅಧ್ಯಯನ ಕುರಿತ ಒಪ್ಪಂದ ನಡೆಯಿತು.
ಗಲ್ಫ್ ದೇಶಗಳೊಂದಿಗೆ ಬಂದರು ಸಂಬಂಧ ಮತ್ತು ಬಾಹ್ಯ ಸಂಬಂಧವನ್ನು ಹೆಚ್ಚಿಸುವುದಕ್ಕೆ ಈ ಭೇಟಿ ಅನುಕೂಲಕರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಯುಎಇ ಜತೆಗೆ ಭಾರತ ಬಹು ಹಂತದ ಪಾಲುದಾರಿಕೆಗಳನ್ನು ಸಾಧಿಸಿಕೊಂಡಿದೆ ಎಂದು ಭಾರತ ವಿದೇಶಾಂಗ ಇಲಾಖೆ ಪತ್ರಿಕಾ ಹೇಳಿಕೆ ನೀಡಿತು. ಇದರಲ್ಲೀಗ ನಾವು ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಿದ್ದೇವೆ. ಅರಬ್ ವಿಶ್ವ ಮತ್ತು ಗಲ್ಫ್ ದೇಗಳೊಂದಿಗೆ ಭಾರತ ಆರ್ಥಿಕವಾಗಿ ಸಂಬಂಧ ಸುಧಾರಿಸಲು ಪ್ರಯತ್ನಿಸಿದೆ ಕೂಡ. ಎಮಿರೇಟ್ಸ್ ನಲ್ಲಿ ಹಿಂದು ದೇವಾಲಯ ನಿರ್ಮಾಣ ಮಾಡಿದ್ದಕ್ಕೆ ಅಬುದಾಬಿ ಮತ್ತು ಅಲ್ಲಿನ ಸರ್ಕಾರಕ್ಕೆ ಮೋದಿ ಧನ್ಯವಾದ ಸಲ್ಲಿಸಿದರು.  
ತಮ್ಮ ಪ್ರವಾಸದ ಕೊನೆ ಹಂತದಲ್ಲಿ ಪ್ರಧಾನಿಯವರು ಸುಲ್ತಾನ್ ಕಬೂಸ್ ಬಿನ್ ಅವರ ಆಹ್ವಾನದ ಮೇರೆಗೆ ಮಸ್ಕತ್ ಗೆ ಭೇಟಿ ನೀಡಿದರು. ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳು ಹಾಗೂ ಪರಸ್ಪರ ಹಿತಾಸಕ್ತಿ ವಿಷಯಗಳ ಬಗ್ಗೆ ಈ ಎರಡೂ ನಾಯಕರು ವಿಚಾರ ವಿನಿಮಯ ನಡೆಸಿದರು. ಹಿಂದೂ ಮಹಾ ಸಾಗರ ಮತ್ತು ಅರಬ್ಬೀ ಸಮುದ್ರದಲ್ಲಿ ಎರಡೂ ದೇಶಗಳು ಬಂದರು ಪಾಲುದಾರಿಕೆ ಹೊಂದಿರುವುದನ್ನು ಗಟ್ಟಿಯಾಗಿಸಲು ಎರಡೂ ನಾಯಕರು ಆದ್ಯತೆ ನೀಡಿದರು.  
ಸದ್ಯ ಎರಡೂ ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಭದ್ರತಾ, ರಕ್ಷಣಾ ಸಂಬಂಧ ಮತ್ತು ಸಹಕಾರದ ಬಗ್ಗೆ ಹೆಚ್ಚು ತೃಪ್ತಿ ವ್ಯಕ್ತಪಡಿಸಿದ ನಾಯಕರು, ಬಾಹ್ಯಾಕಾಶ, ಸೈಬರ್ ಭದ್ರತೆ, ಇಂಧನ ಭದ್ರತೆ, ನವೀಕೃತ ಇಂಧನ ಆಹಾರ ಭದ್ರತೆ ವಿಷಯದಲ್ಲೂ ಸಹಕಾರ ವಿಸ್ತರಣೆ ಮಾಡುವಂತೆ ಮಾತನಾಡಿಕೊಂಡರು. ಈ ಭೇಟಿಯ ವೇಳೆ ಎರಡೂ ದೇಶಗಳ ಮಧ್ಯೆ ಒಟ್ಟು 8 ಒಪ್ಪಂದಗಳು ಏರ್ಪಟ್ಟವು. ಇದರಿಂದ ಉಭಯ ದೇಶಗಳ ಸಂಬಂಧ ಮತ್ತೊಂದು ಮಜಲಿಗೆ ಸಾಗುವುದು ನಿಚ್ಚಳವಾಗಿದೆ. 
ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಪರಸ್ಪರ ಹಿತಾಸಕ್ತಿ, ಪಶ್ಚಿಮ ಏಷ್ಯಾದಲ್ಲಿ ಭದ್ರತಾ ಪರಿಸ್ಥಿತಿ, ಮಧ್ಯಪೂರ್ವ ಹಾಗೂ ದಕ್ಷಿಣ ಏಷ್ಯಾ ಭದ್ರತೆಗಳ ಬಗ್ಗೆಯೂ ಭಾರತ ಮತ್ತು ಓಮನ್ ವಿಚಾರ ವಿನಿಮಯ ನಡೆಸಿದವು. ಶಾಂತಿ ಭಂಗ ಪಡಿಸುತ್ತಿರುವ ಭಯೋತ್ಪಾದನೆ ಬಗ್ಗೆ ಎರಡೂ ದೇಶಗಳು ಆತಂಕ ವ್ಯಕ್ತಪಡಿಸಿ, ಈ ಪಿಡುಗಿನ ನಿವಾರಣೆಗೆ ಒಗ್ಗೂಡಿ ಕಾರ್ಯನಿರ್ವಹಿಸುವ ಬಗ್ಗೆ ಒಪ್ಪಿಕೊಂಡವು. ಎಲ್ಲಾ ರೀತಿಯ ಉಗ್ರವಾದವನ್ನೂ ನಾವು ಖಂಡಿಸಬೇಖಕು ಮತ್ತು ಯಾವುದೇ ಮೂಲೆಯಲ್ಲೂ ಭಯೋತ್ಪಾದನೆ ಸಂಭವಿದರೂ ನಾವು ಸುಮ್ಮನಿರಬಾರದು ಎಂದು ಚರ್ಚೆ ನಡೆಸಲಾಯಿತು.  
ಒಟ್ಟಿನಲ್ಲಿ ಗಲ್ಫ್ ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿರುವುದು ಬಲಿಷ್ಠ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಅರ್ಥ ತಂದುಕೊಟ್ಟಿದೆ. 
ಲೇಖನ : ಪದಮ್ ಸಿಂಗ್, ಎಐಆರ್ ಸುದ್ದಿ ವಿಶ್ಲೇಷಕ