ಲಷ್ಕರೆ ತಯ್ಬಾ ಉಗ್ರ ಮೊಹಮ್ಮದ್ ನವೀದ್ ಶ್ರೀನಗರದ ಆಸ್ಪತ್ರೆಯಿಂದ ತಪ್ಪಿಸಿಕೊಂಡಿರುವ ಪ್ರಕರಣ ಕುರಿತು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ಆರಂಭ

ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಷ್ಕರೆ ತಯ್ಬಾ ಉಗ್ರ ಮೊಹಮ್ಮದ್ ನವೀದ್ ಝಾಟ್ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ – ಎನ್‌ಐಎ ತನಿಖೆ ಕೈಗೆತ್ತಿಕೊಂಡಿದೆ.

ಫೆಬ್ರವರಿ ೬ರಂದು ಝಾಟ್‌ನನ್ನು ಪೊಲೀಸರು ಚಿಕಿತ್ಸೆಗಾಗಿ ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಕರೆ ತಂದಿದ್ದರು. ಈ ಸಂದರ್ಭದಲ್ಲಿ ಕೆಲವು ಉಗ್ರರು ಪೊಲೀಸರ ಮೇಲೆ ದಾಳಿ ನಡೆಸಿ ಝಾಟ್‌ನನ್ನು ಪರಾರಿ ಮಾಡಿಸಿದ್ದರು. ಈ ಸಂದರ್ಭ ಪೊಲೀಸರಾದ ಮುಷ್ತಾಕ್ ಅಹಮದ್, ಬಾಬರ್ ಅಹಮದ್ ಹುತಾತ್ಮರಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ ಎಫ್‌ಐಆರ್ ದಾಖಲಿಸಿದೆ. ಸ್ಥಳೀಯ ಕರನ್ ನಗರ್ ಪೊಲೀಸ್ ಠಾಣೆಯಲ್ಲಿಯೂ ಎಫ್‌ಐಆರ್ ದಾಖಲಿಸಲಾಗಿದೆ.

ರಾಷ್ಟ್ರೀಐ ತನಿಖಾ ದಳದ ತಂಡ ಇಂದು ಶ್ರೀನಗರಕ್ಕೆ ಭೇಟಿ ನೀಡಲಿದ್ದು, ತನಿಖೆ ಮುಂದುವರಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.