ಹಿಂಸಾಚಾರ ಪೀಡಿತ ಆಫ್ರಿಕನ್ ದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಭಾರತದ ೨,೩೦೦ ಯೋಧರ ನಿಯೋಜನೆ, ದಕ್ಷಿಣ ಸೂಡಾನ್‌ಗೆ ಪ್ರಯಾಣ

ಆಫ್ರಿಕನ್ ದೇಶಗಳಲ್ಲಿನ ಹಿಂಸಾಚಾರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ದಕ್ಷಿಣ ಸೂಡಾನ್‌ಗೆ ತೆರಳುತ್ತಿದೆ.

ಭಾರತದ ೨,೩೦೦ ಯೋಧರು ಈ ಶಾಂತಿಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಿಸಲು ತೆರಳುತ್ತಿದ್ದಾರೆ. ಈ ಕುರಿತು ನವದೆಹಲಿಯಲ್ಲಿ ಸೇನಾ ವಕ್ತಾರ ಕರ್ನಲ್ ಅಮಾನ್ ಆನಂದ್ ಮಾಹಿತಿ ನೀಡಿದರು.

ದಕ್ಷಿಣ ಸೂಡಾನ್‌ನಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಭಾರತೀಯ ಯೋಧರ ಪಡೆ ನಿಯೋಜನೆಗೊಂಡಿದೆ. ಸುಮಾರು ೨,೩೦೦ ಯೋಧರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾರೆ ಎಂದರು.

ಗರ್ವಾಲ್ ರೈಫಲ್ಸ್ ರೆಜಿಮೆಂಟ್‌ನ ಇನ್‌ಫ್ಯಾಂಟ್ರಿ ಬೆಟಾಲಿಯನ್ ಪಡೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅಮಾನ್ ಆನಂದ್ ತಿಳಿಸಿದರು.

ಅಧಿಕೃತ ಮೂಲಗಳ ಪ್ರಕಾರ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲಿ ಭಾರತ ಅತಿ ಹೆಚ್ಚು ಯೋಧರನ್ನು ನಿಯೋಜನೆ ಮಾಡುತ್ತಿದೆ. ಇದುವರೆಗೆ ೨ ಲಕ್ಷಕ್ಕೂ ಹೆಚ್ಚು ಯೋಧರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಆರು ದಶಕಗಳಲ್ಲಿ ವಿಶ್ವಸಂಸ್ಥೆಯ ೭೧ ಶಾಂತಿ ಪಾಲನಾ ಯೋಜನೆಯ ಪೈಕಿ ೫೦ಕ್ಕೂ ಹೆಚ್ಚು ಯೋಜನೆಗಳಲ್ಲಿ ಭಾರತ ಕೈಗೊಂಡಿದೆ. ಸದ್ಯ ೧೬ ಕಾರ್ಯಾಚರಣೆಗಳ ಪೈಕಿ ೧೩ರಲ್ಲಿ ಭಾರತೀಯ ಯೋಧರು ನಿಯೋಜನೆಗೊಂಡಿದ್ದಾರೆ.