ಕಾಂಗ್ರೆಸ್ನಿಂದ ಸಂಸತ್ನ ಉಭಯ ಸದನಗಳ ಕಲಾಪ, ಉದ್ದೇಶಪೂರ್ವಕವಾಗಿ ಅಡ್ಡಿ – ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಆರೋಪ.

ಸಂಸತ್‌ನ ಉಭಯ ಸದನಗಳ ಕಲಾಪಗಳನ್ನು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ದೂರಿದ್ದಾರೆ.

ದೆಹಲಿಯಲ್ಲಿಂದು ಬಿಜೆಪಿ ಸಂಸದೀಯ ಮಂಡಳಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಸರ್ಕಾರ ಅನೇಕ ಬಾರಿ ಸ್ಪಷ್ಟಪಡಿಸಿದೆ.  ಆದರೆ ಲೋಕಸಭೆ ಮತ್ತು ರಾಜ್ಯ ಸಭೆ ಕಲಾಪಗಳು ನಡೆಯದಂತೆ ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಪ್ರಜಾತಂತ್ರ ವಿರೋಧಿ ನಡೆಯನ್ನು ಅನುಸರಿಸುತ್ತಿದೆ ಎಂದು ದೂರಿದರು.

ಕಲಾಪಗಳು ಸುಗಮವಾಗಿ ನಡೆಯಲು ಸಹಕರಿಸಬೇಕೆಂದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಿಗೆ ಅವರು ಮನವಿ ಮಾಡಿದ್ದಾರೆ.  ಇದಕ್ಕೂ ಮುನ್ನ ಸಂಸತ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳಲ್ಲಿ ಪದೇ ಪದೇ ಸೋಲು ಕಾಣುತ್ತಿರುವುದರಿಂದ ಹತಾಶೆಗೊಂಡು ಕಾಂಗ್ರೆಸ್ ಈ ನಡೆ ಅನುಸರಿಸುತ್ತಿದೆ.  ಉತ್ತಮ ಆಡಳಿತ ಮತ್ತು ಜನಸ್ನೇಹಿ ನೀತಿಗಳಿಂದ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಮುಂದುವರೆಯಲಿದೆ ಎಂದು ಹೇಳಿದರು.