ಕ್ಷಯರೋಗ ಮುಕ್ತ ಭಾರತ ಅಭಿಯಾನಕ್ಕೆ ಪ್ರಧಾನಮಂತ್ರಿ ಚಾಲನೆ : ೨೦೨೫ರ ವೇಳೆಗೆ ಕ್ಷಯರೋಗ ನಿರ್ಮೂಲನೆ ಗುರಿ – ನರೇಂದ್ರ ಮೋದಿ

ಕ್ಷಯರೋಗವನ್ನು ಅಂತ್ಯಗೊಳಿಸುವ ಉದ್ದೇಶವನ್ನೊಳಗೊಂಡ ಶಿಖರ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿಂದು ಉದ್ಘಾಟಿಸಿದರು.

೨೦೨೫ರ ವೇಳೆಗೆ ಕ್ಷಯರೋಗ ಅಂತ್ಯಗೊಳಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು.

೨೫ ವರ್ಷಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ – ಡಬ್ಲ್ಯೂಎಚ್‌ಒ, ಕ್ಷಯರೋಗವನ್ನು ತುರ್ತುಚಿಕಿತ್ಸೆಯ ರೋಗವಾಗಿ ಘೋಷಿಸಿತ್ತು.  ಅಂದಿನಿಂದ ಭಾರತ ಕ್ಷಯರೋಗ ವಿರುದ್ಧ ಹೋರಾಟ ನಡೆಸುತ್ತಾ ಬಂದಿದೆ.  ಇಡೀ ವಿಶ್ವದಲ್ಲಿ ಕ್ಷಯವನ್ನು ಸಂಪೂರ್ಣವಾಗಿ ಅಂತ್ಯಗೊಳಿಸಲು ಈ ಸಮಾವೇಶ ಉತ್ತಮ ವೇದಿಕೆಯಾಗಿದೆ, ಕ್ಷಯದಂತಹ ರೋಗಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಹೊಸ ಕ್ರಮಗಳನ್ನು ತೆಗೆದುಕೊಂಡಿದ್ದು, ಬಜೆಟ್ ಅನುದಾನವನ್ನು ಹೆಚ್ಚಿಸಿದೆ, ನೇರ ಹಣ ವರ್ಗಾವಣೆ ಮೂಲಕ ಪೌಷ್ಟಿಕಾಂಶ ನೆರವನ್ನು ಒದಗಿಸಲಾಗುತ್ತಿದೆ, ಈ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸರ್ಕಾರ ಖಾಸಗಿ ಕ್ಷೇತ್ರದೊಂದಿಗೆ ಕೆಲಸ ಮಾಡುತ್ತಿದೆ ಎಂದರು ಅವರು ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮಾತನಾಡಿ, ಇಡೀ ವಿಶ್ವದಿಂದ ಕ್ಷಯವನ್ನು ನಿರ್ಮೂಲನೆಗೊಳಿಸುವುದಕ್ಕೆ ಭಾರತ ಬದ್ಧವಾಗಿದೆ ಎಂದು ಹೇಳಿದರು.

ಡಬ್ಲ್ಯೂಎಚ್‌ಓ ಮಹಾನಿರ್ದೇಶಕ ಡಾ.ತೆದ್ರೋಸ್ ಅದಾನೊಂ ಗೆಬ್ರೆಯೆಸುಸ್ ಮಾತನಾಡಿ, ಕ್ಷಯ ವಿರುದ್ಧ ಹೋರಾಟಕ್ಕೆ ಭಾರತ ಸೇರಿದಂತೆ ಇತರ ದೇಶಗಳೊಂದಿಗೆ ಡಬ್ಲ್ಯೂಎಚ್‌ಓ ಕಾರ್ಯನಿರ್ವಹಿಸಲಿದೆ ಎಂದರು.

ಕ್ಷಯ ನಿರ್ಮೂಲನೆಗೆ ರಾಷ್ಟ್ರೀಯ ಕಾರ್ಯತಂತ್ರ ಯೋಜನೆಯಡಿ ಈ ಅಭಿಯಾನವನ್ನು ಆಯೋಜಿಸಿದ್ದು, ಮುಂದಿನ ಮೂರುವರ್ಷಗಳ ಅವಧಿಗೆ ಈ ಯೋಜನೆಯಡಿ  ೧೨ ಸಾವಿರ ಕೋಟಿ ರೂ ವೆಚ್ಚ ಮಾಡಲಾಗುತ್ತಿದ್ದು, ರೋಗಪತ್ತೆಗೆ ಗುಣಮಟ್ಟದ ತಂತ್ರಜ್ಞಾನ, ಬೆಂಬಲ ನೀಡುವ ಮತ್ತು ಚಿಕಿತ್ಸೆ ದೊರಕಿಸುವ ಉದ್ದೇಶವನ್ನು ಹೊಂದಲಾಗಿದೆ.

ದೇಶದಲ್ಲಿ ಕ್ಷಯರೋಗವನ್ನು ಬರುವ ೨೦೨೫ರ ವೇಳೆಗೆ ನಿರ್ಮೂಲನೆಗೊಳಿಸುವ ಉದ್ದೇಶವನ್ನು ಪ್ರಧಾನಮಂತ್ರಿ ಅವರು ಹೊಂದಿದ್ದಾರೆ ಎಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ. ಕಳೆದ ೧೯೯೭ರ ವರದಿ ಪ್ರಕಾರ ದೇಶದಲ್ಲಿ ಸುಮಾರು ಎರಡು ಕೋಟಿ ಕ್ಷಯರೋಗ ಸಮಸ್ಯೆಯಿಂದ ಬಳಲುತ್ತಿರುವವರಿದ್ದು, ಇದಕ್ಕಾಗಿ ಸುಸ್ಥಿರ ಅಭಿವೃದ್ಧಿ ಗುರಿ ನಿಗದಿಮಾಡಲಾಗಿದೆ. ರಾಷ್ಟ್ರೀಯ ಕ್ಷಯರೋಗ ನಿವಾರಣಾ ಯೋಜನೆಯನ್ನು ಪರಿಷ್ಕರಿಸಲಾಗಿದೆ.