೨ ಸಾವಿರದ ೬೫೪ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ- ಸಿಬಿಐನಿಂದ ಗುಜರಾತ್ ಮೂಲದ ಖಾಸಗಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ, ಉತ್ತೇಜಕ ಸೇರಿ ಮೂವರ ಬಂಧನ.

೨ ಸಾವಿರದ ೬೫೪ ಕೋಟಿ ರೂಪಾಯಿಗೂ ಅಧಿಕ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುಜರಾತ್ ಮೂಲದ ಡೈಮಂಡ್ ಪವರ್ ಇನ್‌ಫ್ರಾಸ್ಟಕ್ಚರ್ ಲಿಮಿಟೆಡ್ ಖಾಸಗಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಮೂವರು ಮಂದಿಯನ್ನು ಸಿಬಿಐ ಬಂಧಿಸಿದೆ.

ವಡೋದರದಲ್ಲಿರುವ ಈ ಕಂಪೆನಿ ಬ್ಯಾಂಕ್‌ಗಳಿಗೆ ತಪ್ಪು ಮಾಹಿತಿ ಮತ್ತು ನಕಲಿ ದಾಖಲೆ ಪತ್ರಗಳನ್ನು ನೀಡಿ, ವಂಚಿಸಿರುವ ಹಿನ್ನೆಲೆಯಲ್ಲಿ ಸಿಬಿಐ ಮೂರು ಮಂದಿಯನ್ನು ಬಂಧಿಸಿದೆ.

೨೦೦೮ರಿಂದ ೨೦೧೬ರ ಜೂನ್ ೨೯ರವರೆಗೆ ಖಾಸಗಿ ಕಂಪೆನಿ ಕೇಬಲ್ ನಿರ್ಮಾಣಕ್ಕಾಗಿ ಸುಮಾರು ೧೧ ಬ್ಯಾಂಕ್‌ಗಳಿಗೆ ೨ ಸಾವಿರದ ೬೫೪ ಕೋಟಿ ರೂಪಾಯಿ ಸಾಲ ಪಡೆದು, ಅದನ್ನು ಮರುಪಾವತಿ ಮಾಡದೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ಬ್ಯಾಂಕ್‌ಗಳಾದ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ, ಅಲಹಾಬಾದ್, ಆಕ್ಸಿಸ್ ಮತ್ತು ಎಸ್‌ಬಿಐ ಬ್ಯಾಂಕ್ ಕೂಡ ಸೇರಿದೆ.

ಸಾಲ ಪಡೆದು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಆರ್‌ಬಿಐ ಈ ಕಂಪೆನಿಯನ್ನು ಸುಸ್ತಿದಾರರ ಪಟ್ಟಿಯಲ್ಲಿ ಸೇರಿಸಿದೆ. ಈ ತಿಂಗಳ ೫ರಿಂದ ವಡೋದರದ ವಿವಿಧ ಭಾಗಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಸಂಬಂಧಿಸಿದ ಕಂಪೆನಿಗೆ ನೋಟಿಸ್ ಜಾರಿ ಮಾಡಿ, ಅದಕ್ಕೆ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಮೂವರನ್ನು ಬಂಧಿಸಿದೆ ಎಂದು ಸಿಬಿಐ ತಿಳಿಸಿದೆ.