ಲಂಡನ್‌ನಲ್ಲಿಂದು ಬ್ರಿಟಿಷ್ ಪ್ರಧಾನಿ ತೆರೆಸಾ ಮೆ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತುಕತೆ ; ಭಾರತ-ಇಂಗ್ಲೆಂಡ್ ದ್ವಿಪಕ್ಷೀಯ ಸಂಬಂಧ ಸುಧಾರಣೆ, ವ್ಯಾಪಾರ ಹೂಡಿಕೆ ಬಗ್ಗೆ ಚರ್ಚೆ

ಲಂಡನ್‌ನಲ್ಲಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬ್ರಿಟಿಷ್ ಪ್ರಧಾನಿ ತೆರೆಸಾ ಮೆ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.

ಈ ವೇಳೆ ಭಾರತ-ಇಂಗ್ಲೆಂಡ್ ನಡುವಿನ ಸಂಬಂಧ ವೃದ್ಧಿ, ನವೀಕರಿಸಬಹುದಾದ ಇಂಧನ, ಎರಡೂ ದೇಶಗಳ ನಡುವೆ ಸೌಹರ್ದಕ್ಕೆ ಒತ್ತು ಸೇರಿದಂತೆ ಹಲವು ವಿಷಯಗಳ ಕುರಿತು  ಚರ್ಚೆ ನಡೆಸಿದರು.

ಎರಡು ವರ್ಷದ ಹಿಂದೆ ಬ್ರಿಟಿಷ್ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ರಕ್ಷಣೆ, ಭದ್ರತೆ, ಸಹಕಾರ ಸೇರಿದಂತೆ ವಿವಿಧ ವಿಷಯಗಳ ಒಪ್ಪಂದಗಳ ಪ್ರಗತಿಯ ಚರ್ಚೆ ಹಾಗೂ ಭಯೋತ್ಪಾದನೆ, ಮೂಲಭೂತವಾದದ ವಿರುದ್ಧ ಹೋರಾಟ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಉಭಯ ನಾಯಕರು ಚರ್ಚೆ ನಡೆಸಿದರು.

ಆ ಬಳಿಕ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಸಿರಿಯಾ ಮೇಲೆ ನಡೆದ ರಾಸಾಯನಿಕ ದಾಳಿಯ ಬಗ್ಗೆ ಉಭಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಎರಡು ದೇಶಗಳ ನಡುವೆ ಒಂದು ಶತಕೋಟಿ ಪೌಂಡ್ ಮೊತ್ತದ ರಾಸಾಯನಿಕ ಶಸ್ತ್ರಾಸ್ತ್ರಗಳ ಒಪ್ಪಂದಕ್ಕೆ ಸಮ್ಮತಿ ನೀಡಲಾಗಿದೆ. ಅಲ್ಲದೇ, ಭಾರತ-ಇಂಗ್ಲೆಂಡ್ ನಡುವೆ ವ್ಯಾಪಾರ ವಿವಿಧ ವಿಷಯಗಳಿಗೆ ಅಡೆತಡೆ ನಿವಾರಣೆ, ತಂತ್ರಜ್ಞಾನದಲ್ಲಿ ಪಾಲುದಾರಿಕೆ, ಆರ್ಥಿಕ ಹೂಡಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು ಎಂದು ತಿಳಿಸಲಾಗಿದೆ. ಕಾಮನ್‌ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆ ನಾಳೆ ನಡೆಯಲಿದ್ದು, ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ತೆರೆಸಾ ಮೆ ಸುಸ್ಥಿರ ಅಭಿವೃದ್ಧಿ, ಭದ್ರತೆ ಸೇರಿದಂತೆ ಹಲವು ವಿಷಯಗಳ ಕುರಿತು ಸಹಿ ಹಾಕುವ ಸಾಧ್ಯತೆಗಳಿವೆ.

ಇಂಗ್ಲೆಂಡ್‌ನಲ್ಲಿರುವ ಭಾರತೀಯರು ತಾಯ್ನಾಡಿನಲ್ಲಿ ಬಂಡವಾಳ ಹೂಡಿಕೆ ಮಾಡುವ ಕುರಿತಂತೆ ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.