ನ್ಯಾಯಮೂರ್ತಿ ಲೋಯಾ ಸಾವಿನ ಕುರಿತ ತನಿಖೆಗೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್.

ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ಅವರ ನಿಗೂಢ ಸಾವಿನ ಕುರಿತಂತೆ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಸಲ್ಲಿಕೆಯಾಗಿರುವ ದಾಖಲೆಗಳ ಪ್ರಕಾರ ಲೋಯಾ ಅವರ ಸಾವು ಸಹಜ ಕಾರಣಗಳಿಂದ ಆಗಿದೆ ಎಂದು ತಿಳಿದುಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಹೇಳಿದೆ. ಲೋಯಾ ಅವರ ಸಾವಿನ ಹಾಗೂ ಸಂದರ್ಭದ ಕುರಿತಂತೆ ನಾಲ್ವರು ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆಗಳ ಬಗ್ಗೆ ಅನುಮಾನಪಡಲು ಯಾವುದೇ ಕಾರಣಗಳಿಲ್ಲ ಎಂದು ನ್ಯಾಯಪೀಠ ಹೇಳಿದೆ. ನ್ಯಾಯಾಂಗದ ಅಧಿಕಾರಿಗಳು ಹಾಗೂ ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಲು ಈ ಪ್ರಕರಣವನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ, ಈ ರೀತಿಯ ಅರ್ಜಿಗಳನ್ನು ಸಲ್ಲಿಸುವ  ಮೂಲಕ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆತರಲು ಯತ್ನಿಸಲಾಗುತ್ತಿದೆ ಎಂದು  ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಸೋಹ್ರಾಬುದ್ದೀನ್‌ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ  ನ್ಯಾಯಮೂರ್ತಿ ಲೋಯಾ ಅವರು, ೨೦೧೪ರ ಡಿಸೆಂಬರ್ ೧ರಂದು ನಾಗ್ಪುರದಲ್ಲಿ ವಿವಾಹ ಸಮಾರಂಭsವೊಂದಕ್ಕೆ ತೆರಳುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು.