ಮಹಿಳೆಯರು ಮತ್ತು ಮಕ್ಕಳಲ್ಲಿ ಪೌಷ್ಠಿಕತೆ ಹೆಚ್ಚಿಸುವ ಉದ್ದೇಶದ ಪೋಷಣೆ ಅಭಿಯಾನದ ಎರಡನೇ ಹಂತದಲ್ಲಿ ೨೩೫ ಜಿಲ್ಲೆಗಳ ಆಯ್ಕೆ.

ದೇಶದಲ್ಲಿ ಮಹಿಳೆಯರು, ಮಕ್ಕಳು ಮತ್ತು ವಯಸ್ಕ ಬಾಲಕಿಯರಲ್ಲಿನ ರಕ್ತಹೀನತೆ, ಅಪೌಷ್ಟಿಕತೆಯನ್ನು ತಗ್ಗಿಸುವ ಉದ್ದೇಶದ ಪೋಷಣೆ ಅಭಿಯಾನವನ್ನು ೨ನೇ ಹಂತದಲ್ಲಿ ೨೩೫ ಜಿಲ್ಲೆಗಳಲ್ಲಿ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನವದೆಹಲಿಯಲ್ಲಿ ನಿನ್ನೆ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪೋಷಣೆ ಅಭಿಯಾನದಡಿ ರಚಿಸಲಾಗಿರುವ ಭಾರತೀಯ ಪೌಷ್ಟಿಕಾಂಶ ಸವಾಲುಗಳ ಕುರಿತಾದ ರಾಷ್ಟ್ರೀಯ ಮಂಡಳಿಯ ಮೊದಲ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಯೋಜನೆ ಜಾರಿಗೆ ಪ್ರತ್ಯೇಕ ನಿಧಿ ಸ್ಥಾಪಿಸುವ ಬದಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಹಣಕಾಸು ಸಚಿವಾಲಯದೊಂದಿಗೆ ಸಮಾಲೋಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ೧೦ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಮತ್ತು ಅದಕ್ಕಾಗಿ ರಾಜ್ಯಗಳಿಗೆ ಷರತ್ತಿನ ಮೇಲೆ ನಗದು ವರ್ಗಾವಣೆ ಮಾಡಲು ತೀರ್ಮಾನಿಸಲಾಯಿತು. ಈಗಿರುವ ವ್ಯವಸ್ಥೆಯ ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ಒದಗಿಸುವುದು ಯೋಜನೆಯ ಭಾಗವಾಗಿದೆ.