ಸೈಬರ್ ಸಂಬಂಧ ಹಾಗೂ ಗಂಗಾನದಿ ಸ್ವಚ್ಛತೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಒಟ್ಟು ಹತ್ತು ಒಪ್ಪಂದಗಳಿಗೆ ಭಾರತ ಮತ್ತು ಬ್ರಿಟನ್‌ನಿಂದ ಸಹಿ.

ಕೌಶಲ್ಯಾಭಿವೃದ್ಧಿ, ಗಂಗಾ ಪುನರುಜ್ಜೀವನ ಮತ್ತು ಸೈಬರ್ ಸಂಬಂಧಗಳು ಸೇರಿದಂತೆ ಹಲವು ವಲಯಗಳಲ್ಲಿ ಭಾರತ ಮತ್ತು ಬ್ರಿಟನ್ ನಡುವೆ ೧೦ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅಂತಾರಾಷ್ಟ್ರೀಯ ಸೈಬರ್ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಮಾನ ಕಾರ್ಯತಂತ್ರಗಳನ್ನು ಅಭಿವೃದ್ಧಿಗೊಳಿಸಲು ಅನುವಾಗುವಂತೆ ಸೈಬರ್ ಸಂಬಂಧ ನೀತಿ ರೂಪಸಲು ಉಭಯ ದೇಶಗಳು ಪರಸ್ಪರ ಒಪ್ಪಿವೆ. ಈ ಒಪ್ಪಂದದಡಿ ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ಮತ್ತು ಸೇವೆಗಳ ಭದ್ರತೆಗೆ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಗಂಗಾನದಿ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಶುದ್ಧ ಗಂಗಾ ರಾಷ್ಟ್ರೀಯ ಯೋಜನೆ ಮತ್ತು ಬ್ರಿಟನ್ ಮೂಲದ ನೈಸರ್ಗಿಕ ಪರಿಸರ ಸಂಶೋಧನಾ ಮಂಡಳಿ ಜೊತೆ ಮಹತ್ವದ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಉಭಯ ದೇಶಗಳು, ವೃತ್ರಿಪರ ಶಿಕ್ಷಣ ಮತ್ತು ತರಬೇತಿ ಒಪ್ಪಂದಕ್ಕೂ ಸಹಿ ಹಾಕಿದವು. ಅದರಡಿ ಬ್ರಿಟನ್‌ಗೆ ಅಗತ್ಯವಿರುವ ಮತ್ತು ಬೇಡಿಕೆಯುಳ್ಳ ತಾಂತ್ರಿಕ ಮತ್ತು ಕೌಶಲ್ಯ ಪರಿಣಿತಿಯನ್ನು ಒದಗಿಸಿಕೊಡುವುದು ಸೇರಿದೆ. ಇದಲ್ಲದೆ, ಸುರಕ್ಷಿತ ಶಾಂತಿಯುತ ಉದ್ದೇಶಗಳಿಗೆ ಸುರಕ್ಷಿತ ಅಣು ಇಂಧನ ಬಳಕೆ ನಿಯಂತ್ರಣ ಕುರಿತಂತೆ ಭಾರತದ ಅಣು ಇಂಧನ ನಿಯಂತ್ರಣ ಮಂಡಳಿ ಮತ್ತು ಬ್ರಿಟನ್‌ನ ಅಣು ನಿಯಂತ್ರಣ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಪಶು ಸಂಗೋಪನೆ, ಹೈನುಗಾರಿಕೆ, ಮತ್ಯ್ಸೋದ್ಯಮ ಮತ್ತಿತರ ವಲಯಗಳಲ್ಲೂ ಸಹ ಸಹಕಾರ ಸಂಬಂಧ ವಿಸ್ತರಣೆಯ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿವೆ.ಅಂತಾರಾಷ್ಟ್ರೀಯ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಂಭೀರ ಅಪರಾಧ ಚಟುವಟಿಕೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೂ ಸಹಿ ಹಾಕಲಾಗಿದೆ. ಆಯುಷ್ ಸಚಿವಾಲಯದಡಿ ಬರುವ ಅಖಿಲ ಭಾರತ ಆಯುರ್ವೇದ ಸಂಸ್ಥೆ ಆಯುರ್ವೇದ ಮತ್ತು ಭಾರತೀಯ ಸಾಂಪ್ರದಾಯಿಕ ವೈದ್ಯ ಪದ್ಧತಿ ಕುರಿತಂತೆ ಜೇಷ್ಠತಾ ಕೇಂದ್ರವನ್ನು ತೆರೆಯಲು ಒಪ್ಪಿಗೆ ನೀಡಲಾಗಿದೆ.