ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೆರಿ ರಾಜ್ಯಗಳ ನಡುವಿನ ಕಾವೇರಿ ಜಲವಿವಾದ, ಕೇಂದ್ರ ಸರ್ಕಾರದಿಂದ ಕಾವೇರಿ ನಿರ್ವಹಣಾ ಮಂಡಳಿ ಕರಡು ಪ್ರತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ. ಇದೇ ತಿಂಗಳ ೧೬ಕ್ಕೆ ವಿಚಾರಣೆ.

ಕರ್ನಾಟಕ, ತಮಿಳುನಾಡು ಮತ್ತು ಪುದುಚೆರಿ ರಾಜ್ಯಗಳ ನಡುವೆ ಕಾವೇರಿ ನದಿ ನೀರಿನ ಸುಗಮ ಹಂಚಿಕೆಯ ಖಾತರಿಗಾಗಿ ರೂಪಿಸಿರುವ ಕಾವೇರಿ ನಿರ್ವಹಣಾ ಯೋಜನೆಯ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠವೊಂದು ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಸಲ್ಲಿಸಿದ ಕರಡು ಯೋಜನಾ ಪ್ರತಿಯನ್ನು ದಾಖಲಿಸಿಕೊಂಡು, ಇದರ ಅಧ್ಯಯನ ನಡೆಸುವುದಾಗಿ ತಿಳಿಸಿದೆ. ಯೋಜನೆಯ ವಿವರಗಳನ್ನು ತಿದ್ದುವುದಿಲ್ಲ, ಬದಲಾಗಿ ಇದೇ ಫೆಬ್ರವರಿಯಲ್ಲಿ ತಾನು ನೀಡಿದ್ದ ತೀರ್ಪಿಗೆ ಅನುಗುಣವಾಗಿ ಯೋಜನೆಯನ್ನು ರೂಪಿಸಲಾಗಿದೆಯೇ ಎಂದು ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಈ ತಿಂಗಳ ೮ರಂದು ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯನ್ನು ಕರೆಸಿಕೊಂಡು ಕರಡು ಯೋಜನೆಯನ್ನು ಇಂದು ತನಗೆ ಸಲ್ಲಿಸತಕ್ಕದ್ದು ಎಂದು ನ್ಯಾಯಾಲಯ ತಾಕೀತು ಮಾಡಿತ್ತು.  ಮುಂದಿನ ವಿಚಾರಣೆ ಮೇ ೧೬ರಂದು ನಡೆಯಲಿದೆ.