ಪಶ್ಚಿಮ ಬಂಗಾಳದ ೨೦ ಜಿಲ್ಲೆಗಳ ೫೬೮ ಪಂಚಾಯತ್ ಮತಗಟ್ಟೆಗಳಲ್ಲಿ ನಡೆಯುತ್ತಿರುವ ಮರು ಮತದಾನ./

ಪಶ್ಚಿಮ ಬಂಗಾಳದ ೨೦ ಜಿಲ್ಲೆಗಳ ೫೬೮ ಪಂಚಾಯತ್ ಚುನಾವಣಾ ಮತಗಟ್ಟೆಗಳಲ್ಲಿ ಇಂದು ಮರುಮತದಾನ ನಡೆಯಿತು.

ಇಂದು ಬೆಳಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿ ಸಂಜೆ ೫ ಗಂಟೆಗೆ ಮುಕ್ತಾಯವಾಗಲಿದೆ.  ಕಳೆದ ಸೋಮವಾರ ನಡೆದ ಮತದಾನ ವೇಳೆ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿತ್ತು.

ಮೊನ್ನೆ ನಡೆದ ಹಿಂಸಾಕೃತ್ಯದಲ್ಲಿ ಕನಿಷ್ಠ ೧೨ ಮಂದಿ ಮೃತಪಟ್ಟಿದ್ದು, ೪೩ ಮಂದಿ ಗಾಯಗೊಂಡಿದ್ದರು.

ಮುರ್ಷಿದಾಬಾದ್ ಜಿಲ್ಲೆಯ ೬೩ ಮತಗಟ್ಟೆಗಳಲ್ಲಿ, ಪಶ್ಚಿಮ ಮಿಡ್ನಾಪುರ್‌ನ ೨೮ ಕಡೆ ಮತ್ತು ಹೂಗ್ಲಿ ಜಿಲ್ಲೆಯ ೧೦ ಮತಗಟ್ಟೆಗಳಲ್ಲಿ ಮರು ಮತದಾನ ನಡೆಯುತ್ತಿದೆ.  ಮುಕ್ತ ಮತ್ತು ನ್ಯಾಯ ಸಮ್ಮತ ಮತದಾನಕ್ಕೆ ಸಕಲ ಭದ್ರತೆ ಕಲ್ಪಿಸಲು ಚುನಾವಣಾ ತಂಡ ರಾಜ್ಯ ಸರ್ಕಾರವನ್ನು ಕೋರಿದೆ.

ಮತಎಣಿಕೆ ನಾಳೆ ನಡೆಯಲಿದೆ.  ಈ ಮಧ್ಯೆ ಸಿಪಿಎಂ ಮತ್ತು ಡೆಮಾಕ್ರಟಿಕ್ ಸೋಷಿಯಲಿಸಮ್ ಪಾರ್ಟಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಬಹುತೇಕ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಕೋರಿತ್ತು.  ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತ್ತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಜಮ್ಮುವಿನಲ್ಲಿ ಇದೇ ಶನಿವಾರ ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುಚ್ಛಕ್ತಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.

ಜಮ್ಮುವಿನ ಕಿಶ್ತ್ವಾರ್ ಜಿಲ್ಲೆಯ ಚೆನಬ್ ನದಿಯ ಉಪನದಿಗೆ ಈ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲಾಗುತ್ತಿದೆ.  ಸುಮಾರು ೮ ಸಾವಿರದ ೧೧೨ ಕೋಟಿ ರೂಪಾಯಿ ವೆಚ್ಚದಲ್ಲಿ ಮುಂದಿನ ೫ ವರ್ಷಗಳಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ನಿರೀಕ್ಷೆ ಇದೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ದೆಹಲಿಯಲ್ಲಿ ನಿನ್ನೆ ಕೇಂದ್ರಾಡಳಿತ ಪ್ರದೇಶಗಳ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶಿಲನೆ ನಡೆಸಿದರು.

ಸ್ಮಾರ್ಟ್ ಸಿಟಿ ಯೋಜನೆ,  ಪ್ರಧಾನ ಮಂತ್ರಿ ಆವಾಸ್ ಯೋಜನೆ, ಪುನರ್ ಅಭಿವೃದ್ಧಿ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್-ಅಮೃತ್ ಯೋಜನೆ, ಸ್ವಚ್ಛ ಭಾರತ್ ಅಭಿಯಾನ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳು ಸಚಿವರಿಗೆ ವಿವರ ನೀಡಿದರು.

ಈ ಪ್ರದೇಶಗಳಲ್ಲಿ ಜನ ಜೀವನ ಉತ್ತಮಪಡಿಸುವ ನಿಟ್ಟಿನಲ್ಲಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಅಧಿಕಾರಿಗಳನ್ನು ಸಚಿವರು ಅಭಿನಂದಿಸಿದರು ಹಾಗೂ ಸಕಾಲದಲ್ಲಿ ಯೋಜನೆ ಅನುಷ್ಠಾನ ಪೂರ್ಣಗೊಳಿಸುವಂತೆ ಸೂಚಿಸಿದರು.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ನಿನ್ನೆ ಸಂಜೆ ದೋಣಿ ಮಗುಚಿ ೧೮ ಮಂದಿ ಮೃತಪಟ್ಟಿದ್ದಾರೆ. ದೋಣಿಯಲ್ಲಿ ಒಟ್ಟು ೫೫ ಮಂದಿ ಇದ್ದು ೧೭ ಮಂದಿಯನ್ನು ರಕ್ಷಿಸಲಾಗಿದೆ. ಇತರರು ನಾಪತ್ತೆಯಾಗಿದ್ದಾರೆ.

ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ದೋಣಿ ಕೊಂಡಮೊದಲಿನಿಂದ ರಾಜಮಹೇಂದ್ರಮ್‌ಗೆ ತೆರಳುತ್ತಿತ್ತು. ಬಿರುಗಾಳಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕೃತ ವರದಿ ತಿಳಿಸಿದೆ.