ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್, ಜೆಡಿಎಸ್ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು

ಸ್ಪಷ್ಟ ಬಹುಮತ ಹೊಂದಿಲ್ಲದ ಬಿಜೆಪಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

೧೦೪ ಸ್ಥಾನ ಹೊಂದಿರುವ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಈಗಾಗಲೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಟ್ಟಾರೆ ೧೧೭ ಸಂಖ್ಯಾಬಲ ಹೊಂದಿರುವುದನ್ನು ರಾಜ್ಯಪಾಲರು ಕಡೆಗಣಿಸಿದ್ದಾರೆ ಎಂದು ದೂರಿ ಉಭಯ ಪಕ್ಷಗಳು ಬುಧವಾರ ರಾತ್ರಿಯೇ ಸುಪ್ರೀಂಕೋರ್ಟ್ ಮೆಟ್ಟಿಲೇರಿತು.

ನ್ಯಾಯಾಲಯ ಇಡೀ ರಾತ್ರಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮುರ್ತಿ ಎ.ಕೆ. ಸಿಕ್ರಿ ನೇತೃತ್ವದ ನ್ಯಾಯಪೀಠ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ಕಲ್ಪಿಸುವ ರಾಜ್ಯಪಾಲರ ಆದೇಶ ಜಾರಿಗೆ ತಡೆ ನೀಡಲು ನಿರಾಕರಿಸಿತು.

ರಾಜ್ಯಪಾಲರಿಗೆ ಬಿಜೆಪಿ ಸಲ್ಲಿಸಿದ್ದ ಪತ್ರ, ಶಾಸಕರ ಸಂಖ್ಯಾಬಲದ ಪತ್ರವನ್ನು,  ನ್ಯಾಯಾಲಯಕ್ಕೆ ಸಲ್ಲಿಸುವಂತೆ ಯಡಿಯೂರಪ್ಪಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿ ಪಡಿಸಿತು.