ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ನಡುವೆ ಸಿಂಗಾಪುರದಲ್ಲಿ ಐತಿಹಾಸಿಕ ಮಾತುಕತೆ – ಜಂಟಿ ದಾಖಲೆ ಪತ್ರಕ್ಕೆ ಉಭಯ ನಾಯಕರಿಂದ ಸಹಿ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿ ಐತಿಹಾಸಿಕ ಮಾತುಕತೆ ಮುಗಿಸಿದ ನಂತರ ಇಂದು ಜಂಟಿ ದಾಖಲೆ ಪತ್ರವೊಂದಕ್ಕೆ ಸಹಿ ಹಾಕಿದ್ದಾರೆ.

ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಟ್ರಂಪ್ ಮಾತನಾಡಿ, ಇದೊಂದು ಸಮಗ್ರ ದಾಖಲೆ ಪತ್ರವೆಂದು ಹೇಳಿದರಾದರೂ ಹೆಚ್ಚಿನ ಮಾಹಿತಿಯನ್ನು ನೀಡಲಿಲ್ಲ.  ಅಮೆರಿಕಾದ ಅಧ್ಯಕ್ಷರು ಮಾತನಾಡಿ, ಈ ಮಾತುಕತೆಗಳ ನಂತರ ತಮ್ಮ ಮತ್ತು ಕಿಮ್ ಉನ್ ಅವರ ನಡುವೆ ವಿಶೇಷ ಸಂಬಂಧದ ಅನುಭವವಾಗುತ್ತಿದೆ ಎಂದು ತಿಳಿಸಿದ್ದಾರೆ.

ಯಾವುದೇ ನಿರೀಕ್ಷೆಗಳಿಗಿಂತ ಈ ಮಾತುಕತೆಗಳು ಅತ್ಯಂತ ಫಲಪ್ರದವಾಗಿ ನಡೆದವು ಎಂದು ಅವರು ಬಣ್ಣಿಸಿದರು.  ಮಾತುಕತೆಗಳ ನಂತರ ಅಣ್ವಸ್ತ್ರ ನಿಶಸ್ತ್ರೀಕರಣ ಕುರಿತ ಒಪ್ಪಂದಕ್ಕೆ ಬರಲು ಸಾಧ್ಯವಾಯಿತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷ ಟ್ರಂಪ್ ಅವರು, ಈ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಎಂದು ಹೇಳಿದರು.

ಉತ್ತರ ಕೊರಿಯಾದ ನಾಯಕ ಕಿಮ್ ಮಾತನಾಡಿ, ಈ ಮಾತುಕತೆಗಳ ನಂತರ ಪರಿಸ್ಥಿತಿ ಸಂಪೂರ್ಣ ಬದಲಾಗಲಿದೆ, ಹಳೆಯ ವಿಚಾರಗಳನ್ನು ಮರೆಯಲು ಉಭಯ ನಾಯಕರು ನಿರ್ಧರಿಸಿರುವುದಾಗಿ ತಿಳಿಸಿದರು.  ಸದ್ಯದಲ್ಲೇ ಪ್ರಮುಖ ಬದಲಾವಣೆಯೊಂದು ವಿಶ್ವಕ್ಕೆ ಗೋಚರವಾಗಲಿದೆ ಎಂದರು.

ಇದಕ್ಕೂ ಮುನ್ನ ನಡೆದ ಉಭಯ ದೇಶಗಳ ನಿಯೋಗ ಮಟ್ಟದ ಮಾತುಕತೆಗಳಲ್ಲಿ ದ್ವಿಪಕ್ಷೀಯ ಸಂಬಂಧಗಳ ಸುಧಾರಣೆಯ ವಿಷಯಗಳ ಬಗ್ಗೆ ಹಾಗೂ ಕೊರಿಯಾ ಉಪಖಂಡ ಸಂಪೂರ್ಣ ಪರಮಾಣು ನಿಶಸ್ತ್ರೀಕರಣಗೊಳ್ಳುವುದನ್ನು ಖಾತರಿಪಡಿಸಿಕೊಳ್ಳುವ ಅಂಶಗಳ ಪ್ರಸ್ತಾಪವಾಯಿತು.  ಉಭಯ ನಾಯಕರ ಈ ಮುಖಾಮುಖಿ ಭೇಟಿ ಸುಮಾರು ೪೫ ನಿಮಿಷಗಳಷ್ಟು ಕಾಲ ನಡೆಯಿತೆಂದು ವರದಿ ತಿಳಿಸಿದೆ.

ಇದಕ್ಕೂ ಮುನ್ನ ಅಧ್ಯಕ್ಷ ಟ್ರಂಪ್ ತಮ್ಮ ಮತ್ತು ಉತ್ತರ ಕೊರಿಯಾ ನಾಯಕರ ನಡುವಣ ಈ ಐತಿಹಾಸಿಕ ಭೇಟಿ ಅದ್ಭುತ ಯಶಸ್ಸು ಕಾಣುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ತಮ್ಮ ಈ ಭೇಟಿಗೆ ಇದ್ದ ಹಲವು ಅಡೆ-ತಡೆಗಳನ್ನು ಯಶಸ್ವಿಯಾಗಿ ನಿವಾರಿಸಿಕೊಳ್ಳಲಾಯಿತೆಂದು ಕಿಮ್ ಉನ್ ಸಹ ಹೇಳಿದರು.