ಭಾರತಕ್ಕೆ ಬೇಕಾಗಿರುವ ದುಷ್ಕರ್ಮಿಗಳನ್ನು ಒಪ್ಪಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಬ್ರಿಟನ್‌ನಿಂದ ಭರವಸೆ.

ಬ್ರಿಟನ್‌ನಿಂದ ನಡೆಯುತ್ತಿರುವ ಭಾರತ ವಿರೋಧಿ ಕಾರ್ಯ ಚಟುವಟಿಕೆಗಳ ಬಗ್ಗೆ ಆ ದೇಶ ನಿಗಾ ವಹಿಸಬೇಕು ಎಂದು ಯುನೈಟೆಡ್ ಕಿಂಗ್ ಡಮ್‌ಗೆ ಭಾರತ ಮನವಿ ಮಾಡಿದೆ.

ಅಲ್ಲಿಯ ಭಯೋತ್ಪಾದನೆ ನಿಗ್ರಹ ಖಾತೆ ಸಹಾಯಕ ಸಚಿವ ಬಾರೊನೆಸ್ ವಿಲಿಯಮ್ಸ್ ಅವರೊಂದಿಗೆ ಈ ಕುರಿತು ದೆಹಲಿಯಲ್ಲಿ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜುಜು ಮಾತುಕತೆ ನಡೆಸಿದರು.

ಭಯೋತ್ಪಾದನೆ ನಿಗ್ರಹ, ಗಡಿ ಪಾರು ಅಪರಾಧಿಗಳ ಮಾಹಿತಿ ವಿನಿಮಯ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಉಭಯ ನಾಯಕರು ಸಮಾಲೋಚನೆ ನಡೆಸಿದರು ಎಂದು ಗೃಹ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ದ್ವಿಪಕ್ಷೀಯ ಸಹಕಾರ ವೃದ್ಧಿಸುವ ಕುರಿತಂತೆಯೂ ಪ್ರಸ್ತಾಪವಾಯಿತು.

ಆರ್ಥಿಕ ಅವ್ಯವಹಾರ ನಡೆಸಿ, ಸುಸ್ತಿದಾರರಾಗಿ ದೇಶ ಬಿಟ್ಟು ಪರಾರಿಯಾಗಿ ಬ್ರಿಟನ್‌ನಲ್ಲಿ ಆಶ್ರಯ ಪಡೆದಿರುವವರ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕುರಿತು ಅಲ್ಲಿನ ಕಾನೂನು ಮತ್ತು ನ್ಯಾಯಾಲಯದ ಪ್ರಕ್ರಿಯೆಗಳನ್ನು ಗೌರವಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.