೪.ದೇಶದ ಕರಾವಳಿ ಹಾಗೂ ಪ್ರಮುಖ ನಗರಗಳನ್ನು ಒಳಗೊಂಡಂತೆ ೨೭ ಕಡೆ ೬ ತಾಸು ಮುಂಚಿತವಾಗಿಯೇ ತೀವ್ರ ಪ್ರತಿಕೂಲ ಹವಾಮಾನದ ಮುನ್ಸೂಚನೆ ನೀಡುವ ಡಾಫ್ಲರ್ ರೇಡಾರ್‌ಗಳನ್ನು ಸ್ಥಾಪನೆಗೆ ಭಾರತೀಯ ಹವಾಮಾನ ಇಲಾಖೆ ನಿರ್ಧಾರ.

ದೇಶದ ಕರಾವಳಿ ಪ್ರದೇಶ ಹಾಗೂ ಪ್ರಮುಖ ನಗರಗಳ ವ್ಯಾಪ್ತಿಯಲ್ಲಿ ತೀವ್ರ ಪ್ರತಿಕೂಲ ಹವಾಮಾನದ ಮುನ್ಸೂಚನೆಯನ್ನು ೬ ತಾಸುಗಳಷ್ಟು ಮುಂಚಿತವಾಗಿಯೇ ನೀಡುವ ಕನಿಷ್ಠ ೨೭ ಡಾಫ್ಲರ್ ರೇಡಾರ್‌ಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು.

ಹವಾಮಾನ ಇಲಾಖೆಯ ಮಹಾನಿರ್ದೇಶಕ ಕೆ.ಜೆ.ರಮೇಶ್ ಗೋವಾದಲ್ಲಿ ನಿನ್ನೆ ಈ ವಿಷಯ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭಾರೀ ಮಳೆ ಹಾಗೂ ಗುಡುಗಿನ ಪರಿಸ್ಥಿತಿಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಲು ಇದರಿಂದ ನೆರವಾಗುವುದು, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಇಂತಹ ವ್ಯವಸ್ಥೆಯಿಂದ ಆಸ್ತಿ ಪಾಸ್ತಿ ಹಾಗೂ ಜೀವಹಾನಿ ತಗ್ಗಿಸಲು ನೆರವಾಗಿದೆ ಎಂದು ಹೇಳಿದರು.

ಈ ರೇಡಾರಗಳ ಜಾಲದಿಂದ ದೇಶದ ಯಾವುದೇ ಭಾಗದಲ್ಲಿ ಸಂಭವಿಸುವ ತೀವ್ರತರ ಹವಾಮಾನ ವಿದ್ಯಮಾನಗಳ ಮೇಲೆ ಇಲಾಖೆ ನಿಗಾ ಇಟ್ಟು ವಿಕೋಪ ನಿರ್ವಾಹಣಾ ಸಂಸ್ಥೆಗಳಿಗೆ ಮುನ್ಸೂಚನೆ ನೀಡಬಹುದಾಗಿದೆ.