ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಇನ್ ನಡುವೆ ನವದೆಹಲಿಯಲ್ಲಿಂದು ನಿಯೋಗ ಮಟ್ಟದ ಮಾತುಕತೆ ಆರಂಭ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಅವರು ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಇಂದು ನಿಯೋಗ ಮಟ್ಟದ ಮಾತುಕತೆ ಆರಂಭಿಸಿದ್ದಾರೆ.

ಮಾತುಕತೆಯ ನಂತರ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಹಕಾರ ಸಂಬಂಧ ವೃದ್ಧಿಗೆ ಪೂರಕವಾಗಿರುವ ಹಲವಾರು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ನಂತರ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಿಯೋಗ ಮಟ್ಟದ ಮಾತುಕತೆ ನಂತರ ಮೋದಿ ಮತ್ತು ಮೂನ್ ಜೆ ಅವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಪತ್ನಿ ಕಿಮ್ ಜುಂಗ್ ಸೂಕ್ ಅವರೊಂದಿಗೆ ಆಗಮಿಸಿರುವ ಮೂನ್ ಜೆ ಇನ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.  ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂನ್ ಜೇ ಇನ್ ಅವರನ್ನು ಸ್ವಾಗತಿಸಿದರು.

ಕಳೆದ ವರ್ಷ ದಕ್ಷಿಣ ಕೊರಿಯಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಮೂನ್ ಜೆ ಅವರ ಮೊಟ್ಟ ಮೊದಲ ಭಾರತದ ಪ್ರವಾಸ ಇದಾಗಿದ್ದು, ೪ ದಿನಗಳ ಪ್ರವಾಸಕ್ಕಾಗಿ ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ.