ಫಿಪಾ ವಿಶ್ವಕಪ್ ಫುಟ್ಬಾಲ್‌ನಲ್ಲಿ ಇಂದು ರಾತ್ರಿ ೨ನೇ ಸೆಮಿಫೈನಲ್ ಪಂದ್ಯ – ಫೈನಲ್ಸ್‌ಗೆ ಪ್ರವೇಶಕ್ಕಾಗಿ ಇಂಗ್ಲೆಂಡ್ ಮತ್ತು ಕ್ರೋವೇಷಿಯಾ ನಡುವೆ ಹಣಾಹಣಿ ನಿರೀಕ್ಷಿತ./

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ  ಮೊದಲ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಜಯ ಸಾಧಿಸಿದ  ಫ್ರಾನ್ಸ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಕಳೆದ ರಾತ್ರಿ ನಡೆದ ನಿರ್ಣಾಯಕ  ಪಂದ್ಯದಲ್ಲಿ ಸ್ಯಾಮ್‌ವೆಲ್ ಗಳಿಸಿದ ಏಕೈಕ ಗೋಲಿನಿಂದ ಗೆಲುವಿನ ನಗೆ ಬೀರಿದ ಫ್ರಾನ್ಸ್, ಬೆಲ್ಜಿಯಂ ಅನ್ನು ೧-೦ ಅಂತರದಿಂದ ಮಣಿಸಿ,  ಪ್ರಶಸ್ತಿ ಸುತ್ತು ತಲುಪಿತು.  ಇದರೊಂದಿಗೆ ಫ್ರಾನ್ಸ್ ಮುಂದಿನ ಭಾನುವಾರ ಮಾಸ್ಕೋದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ೨ನೇ ಸೆಮಿಫೈನಲ್ ಸೆಣಸಲಿರುವ ಇಂಗ್ಲೆಂಡ್- ಕ್ರೋವೇಷಿಯಾಗಳ ಪೈಕಿ ವಿಜೇತ ತಂಡವನ್ನು ಎದುರಿಸಲಿದೆ.  ೧೯೯೮ರ ನಂತರ ಮತ್ತೆ ವಿಶ್ವಕಪ್ ಗೆಲ್ಲುವ ತವಕದಲ್ಲಿರುವ ಫ್ರಾನ್ಸ್, ಅಂತಿಮ ಹಣಾಹಣಿಯಲ್ಲಿ ಎದುರಾಳಿ ತಂಡವನ್ನು  ಮಣಿಸಲು ಸಜ್ಜಾಗಿದೆ. ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ  ೨ನೇ ಸೆಮಿಫೈನಲ್ ಪಂದ್ಯ ಮಾಸ್ಕೋದ ಲುಸ್ನಿಕಿ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಇಂದು ರಾತ್ರಿ ೧೧.೩೦ಕ್ಕೆ  ನಡೆಯಲಿದ್ದು, ಪ್ರಶಸ್ತಿ  ಸುತ್ತಿನ ಮೇಲೆ ಕಣ್ಣಿಟ್ಟಿರುವ ಇಂಗ್ಲೆಂಡ್ ಮತ್ತು ಕ್ರೋವೇಷಿಯಾ ಮುಖಾಮುಖಿಯಾಗಲಿವೆ.