ದೇಶದ ಗ್ರಾಮೀಣ ಪ್ರದೇಶಗಳು ವಿಶೇಷವಾಗಿ ಸಣ್ಣ ಉದ್ಯಮಿಗಳು, ಕಾರ್ಮಿಕರು, ಬಡವರು ಹಾಗೂ ಮಹಿಳೆಯರಿಗಾಗಿ ಸ್ವಯಂ ನೆರವು ತಂಡಗಳು ಮಹತ್ವದ ಪಾತ್ರವಹಿಸುತ್ತಿವೆ – ಪ್ರಧಾನಮಂತ್ರಿ ನರೇಂದ್ರ ಮೋದಿ.

ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಸಣ್ಣ ಉದ್ದಿಮೆದಾರರು ಹಾಗೂ ಕಾರ್ಮಿಕರ ವಿಷಯದಲ್ಲಿ ಸ್ವಯಂ ನೆರವು ತಂಡಗಳು ಮಹತ್ವದ ಪಾತ್ರವಹಿಸುತ್ತಿವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಂದು ಬೆಳಗ್ಗೆ ಹತ್ತು ದಶಲಕ್ಷ ಮಹಿಳೆಯರಿಗೂ ಹೆಚ್ಚು ಸಂಖ್ಯೆ ಹೊಂದಿರುವ ಸ್ವಯಂ ನೆರವು ತಂಡಗಳ ಸದಸ್ಯರೊಂದಿಗೆ ಸಂವಾದ ನಡೆಸಿ, ಈ ತಂಡಗಳು ಬಡವರಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಆರ್ಥಿಕ ಬೆಳವಣಿಗೆಯ ಆಧಾರ ನೆಲೆಗಳಾಗಿವೆ ಎಂದಿದ್ದಾರೆ. ಈ ಎಲ್ಲ ಮಹಿಳೆಯರು ದೃಢ ಸಂಕಲ್ಪ ಮತ್ತು ಉದ್ಯಮಶೀಲತೆಗೆ ನಿದರ್ಶನ ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ಮಹಿಳಾ ಸಬಲೀಕರಣಕ್ಕೆ ಅತ್ಯಂತ ಮಹತ್ವದ ಅಗತ್ಯವೆಂದರೆ ಅವರಿಗೆ ತಮ್ಮ ಶಕ್ತಿ ಸಾಮರ್ಥ್ಯ ಕೌಶಲಗಳನ್ನು ಗುರುತಿಸಿಕೊಳ್ಳುವ ಅವಕಾಶ ಕಲ್ಪಿಸುವುದಾಗಿದೆ ಎಂದು ಪ್ರಧಾನಮಂತ್ರಿ ನುಡಿದರು. ಮಹಿಳೆಯರು ದೇಶದ ಪ್ರತಿಯೊಂದು ವಲಯದಲ್ಲೂ ಕೆಲಸ ಮಾಡುತ್ತಿದ್ದು, ಮಹಿಳೆಯರ ಕೊಡುಗೆ ಇಲ್ಲದ ಕೃಷಿ ಕ್ಷೇತ್ರ ಹಾಗೂ ಹೈನುಗಾರಿಕಾ ವಲಯವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ ದೇಶದ ಎರಡೂವರೆ ಲಕ್ಷ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಲಕ್ಷಾಂತರ ಬಡ ಕುಟುಂಬಗಳನ್ನು ತಲುಪುವ ಗುರಿ ಇದ್ದು, ಅವರಿಗೆ ಸುಸ್ಥಿರವಾದ ಜೀವನೋಪಾಯ ಅವಕಾಶಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು.